ಕಲಬುರ್ಗಿ ಮನೆ ಮೇಲೆ ಬಾಟಲಿ, ಕಲ್ಲೆಸೆತ
ಧಾರವಾಡ: ಇಲ್ಲಿನ ಕಲ್ಯಾಣನಗರದಲ್ಲಿರುವ ಡಾ. ಎಂ.ಎಂ. ಕಲಬುರ್ಗಿ ಅವರ ನಿವಾಸದ ಮೇಲೆ ಭಾನುವಾರ ತಡರಾತ್ರಿ ದುಷ್ಕರ್ಮಿಗಳು ಬಿಯರ್ ಬಾಟಲಿ ಹಾಗೂ ಕಲ್ಲು ಎಸೆದ ಘಟನೆ ನಡೆದಿದೆ.
ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ರಾತ್ರಿ 11 ಗಂಟೆ ಸುಮಾರಿಗೆ ಕಲಬುರ್ಗಿ ಅವರ ಮನೆ ಆವರಣದ ಹೊರಗೆ ನಿಂತು ಬಾಟಲಿ ಮತ್ತು ಕಲ್ಲು ಎಸೆದು ಪರಾರಿಯಾಗಿದ್ದಾರೆ. ಮನೆ ಕಿಟಕಿ ಗಾಜುಗಳು ಒಡೆದಿವೆ.
ಈ ವೇಳೆ ಕಲುಬುರ್ಗಿ ಹಾಗೂ ಕುಟುಂಬಸ್ಥರು ಮನೆಯಲ್ಲೇ ಇದ್ದರು. ಅದೃಷ್ಟವಶಾತ್ ಯಾವುದೇ ಆಪಾಯವಾಗಿಲ್ಲ ಎಂದು ತಿಳಿದುಬಂದಿದೆ. ಕಲಬುರ್ಗಿ ಅವರು ಮೂರ್ತಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದರೂ ಏನೂ ಆಗುವುದಿಲ್ಲ ಎಂಬ ವಿವಾದಿತ ಹೇಳಿಕೆ ನೀಡಿದ್ದ ಬಳಿಕ ಇಷ್ಟು ದಿನಗಳ ಕಾಲ ಅವರ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಅದನ್ನು ಕೇವಲ ಎರಡು ದಿನಗಳ ಹಿಂದೆ ನಿಲ್ಲಿಸಲಾಗಿತ್ತು. ಈ ಸಂದರ್ಭ ನೋಡಿಕೊಂಡು ದುಷ್ಕರ್ಮಿಗಳು ಬಾಟಲಿ, ಕಲ್ಲು ಎಸೆದಿದ್ದಾರೆ.
ವಿದ್ಯಾಗಿರಿ ಪೊಲೀಸ್ ಇನ್‌ಸ್ಪೆಕ್ಟರ್ ಚೆನ್ನಕೇಶವ ಧಾವಿಸಿ ಪರಿಶೀಲನೆ ಮಾಡಿದ್ದಾರೆ. ಪ್ರಕರಣ ದಾಖಲಾಗಿಲ್ಲ.