ಮುಂದುವರಿಯಲಿದೆ ಶರಾವತಿ ಸೇತುವೆ ಶುಲ್ಕ ವಸೂಲಿ
ಹೊನ್ನಾವರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚತುಷ್ಪಥ ರಚಿಸಿ, ಶುಲ್ಕ ವಸೂಲಿ ಆರಂಭಿಸುವವರೆಗೆ ಈಗಿನ ಶರಾವತಿ ಸೇತುವೆ ಶುಲ್ಕ ವಸೂಲಿ ವ್ಯವಸ್ಥೆ ಮುಂದುವರಿಯಲಿದೆ. ಅಲ್ಲದೆ ಈ ವರೆಗೆ ಒಟ್ಟೂ ರು. 20,00,39,384 ಶುಲ್ಕ ವಸೂಲಿ ಮಾಡಲಾಗಿದೆ. ಶರಾವತಿ ಸೇತುವೆಯ ಶುಲ್ಕ ವಸೂಲಿ ಯಾವಾಗ ನಿಲ್ಲುತ್ತದೆ. ಈ ವರೆಗೆ ಬಂದ ಆದಾಯವೆಷ್ಟು? ಎಂಬ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ವಿಧಾನಸಭೆಯಲ್ಲಿ ಶಾಸಕ ಮಂಕಾಳ ವೈದ್ಯ ಲೋಕೋಪಯೋಗಿ ಸಚಿವರಿಗೆ ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಶರಾವತಿ ಸೇತುವೆ ಶುಲ್ಕ ವಸೂಲಿಗೆ ಈ ವರ್ಷ ಪುನಃ ಟೆಂಡರ್ ಕರೆಯಲಾಗಿತ್ತು. ಕಳೆದ 9 ವರ್ಷಗಳಿಂದ ಟೆಂಡರ್ ಪಡೆಯುತ್ತಿರುವ ಬಳ್ಳಾರಿಯ ಎನ್. ಕಿಶೋರಬಾಬು ಅವರಿಗೆ ಗುತ್ತಿಗೆ ಲಭಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಚತುಷ್ಪಥ ರಚಿಸಿ ಶುಲ್ಕ ವಸೂಲಿ ಆರಂಭಿಸುವ ವರೆಗೆ ವಸೂಲಾತಿ ಮುಂದುವರಿಯಲಿದೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ. 1997 ಆ. 1ರಿಂದ ವಸೂಲಿ ಆರಂಭಿಸಲಾಗಿದೆ. ಮೊದಲು 1 ತಿಂಗಳು ಎನ್.ಜಿ. ಮಿಲಾಂಟಾ ಗುತ್ತಿಗೆ ಪಡೆದಿದ್ದರು. ಅನಂತರ 3 ವರ್ಷ ಹರಿಹರದ ಡಿ.ಜಿ. ರಘುನಾಥ ಗುತ್ತಿಗೆ ಪಡೆದಿದ್ದರು. ಅನಂತರ ನಿರಂತರವಾಗಿ ಬಳ್ಳಾರಿಯ ಕಿಶೋರಬಾಬು ಪಡೆಯುತ್ತ ಬಂದಿದ್ದಾರೆ. ಶುಲ್ಕ ವಸೂಲಾತಿ ಆರಂಭವಾದಂದಿನಿಂದ ಸಾರ್ವಜನಿಕರ ಪ್ರತಿಭಟನೆ ನಡೆಯುತ್ತ ಬಂದಿದೆ. ಸ್ಥಳೀಯರಿಂದ ವಸೂಲಿ ಕೈಬಿಟ್ಟ ಮೇಲೆ ಪ್ರತಿಭಟನೆ ನಿಂತಿದ್ದು, ಹೊರರಾಜ್ಯದಿಂದ ಬಂದವರಿಗೆ ನಿಗದಿತ ಮೊತ್ತಕ್ಕಿಂತ ಹೆಚ್ಚು ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಸಾರ್ವತ್ರಿಕವಾಗಿದೆ.