ಸವಣೂರು: ಪಹಣಿ ಪತ್ರಕ್ಕಾಗಿ ಕಾದು ಕುಸಿದು ಬಿದ್ದ ರೈತ
ಸವಣೂರು: ಬೆಳೆ ವಿಮೆ ಸೌಲಭ್ಯಕ್ಕಾಗಿ ಪಹಣಿಪತ್ರ ಪಡೆಯಲು ಸರದಿ ಸಾಲಿನಲ್ಲಿ ನಿಂತ ರೈತರೊಬ್ಬರು ಬಿಸಿಲಿನ ತಾಪಕ್ಕೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಘಟನೆ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಜರುಗಿತು.
ಮುಂಗಾರು ಬಿತ್ತನೆ ಆರಂಭವಾದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಲ್ಲಿ ಸಾಲ, ಕೃಷಿ ಇಲಾಖೆಯ ಸಬ್ಸಿಡಿ ಇತರೆ ಯೋಜನೆಗಳ ಫಲಾನುಭವಿಗಳ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಪಹಣಿ ಪತ್ರ ಲಗತ್ತಿಸಬೇಕಿದೆ. ತಾಲೂಕಿನ ಗ್ರಾಮಾಂತರ ಪ್ರದೇಶಗಳಿಂದ 200ಕ್ಕೂ ಹೆಚ್ಚು ರೈತರು ಸರತಿ ಸಾಲಿನಲ್ಲಿ ನಿಂತಿದ್ದರು.
ಬೆಳೆವಿಮೆ ತುಂಬಲು ಜೂ. 30 ಕೊನೆ ದಿನ. ಹೀಗಾಗಿ, ರೈತರು ಪಹಣಿ ಪತ್ರ ಪಡೆಯಲು ಮುಗಿಬಿದ್ದಿದ್ದರು. ತಳ್ಳಾಟದಲ್ಲಿ ತವರಮಳ್ಳಿಹಳ್ಳಿ ಗ್ರಾಮದ ರೈತ ಪ್ರಜ್ಞೆ ತಪ್ಪಿ ಕುಸಿದು ಬಿದ್ದ. ಇತರ ರೈತರು ಆತನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ತಾಲೂಕು ಕೇಂದ್ರದಲ್ಲಿ ಒಂದೇ ಗಣಕ ಯಂತ್ರದಿಂದ ಪಹಣಿ ಪತ್ರಿಕೆ ನೀಡುತ್ತಿದ್ದು, ವಿದ್ಯುತ್ ವ್ಯತ್ಯಯವಾದರೆ ಇನ್ನಷ್ಟು ಸಮಸ್ಯೆಯಾಗುತ್ತಿದೆ. ಆಗಾಗ ತಾಂತ್ರಿಕ ಸಮಸ್ಯೆ ಎದುರಾಗುತ್ತಿದ್ದು, ಪಹಣಿ ಪತ್ರ ಪಡೆಯಲು ರೈತರು ಪರದಾಡುವಂತಾಗಿದೆ.