ಉಗ್ರಂ ಚಿತ್ರಕ್ಕೆ ವಿದೇಶದಲ್ಲೂ ಬೇಡಿಕೆ
ಹುಬ್ಬಳ್ಳಿ: ಕನ್ನಡ ಚಲನಚಿತ್ರ 'ಉಗ್ರಂ'ನ್ನು ವಿದೇಶಗಳಲ್ಲಿಯೂ ಬಿಡುಗಡೆ ಮಾಡುವಂತೆ ಬೇಡಿಕೆ ಬರುತ್ತಿದೆ ಎಂದು ಚಿತ್ರದ ನಾಯಕ ನಟ ಮುರಳಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಉಗ್ರಂ' ಚಿತ್ರ ಪಕ್ಕಾ ಲೋಕಲ್ ಕಥೆಯುಳ್ಳದ್ದು. ಚಿತ್ರದಲ್ಲಿ ಅಶ್ಲೀಲತೆ ಇಲ್ಲ. ಕ್ರೌರ್ಯ ಮಿತಿ ಮೀರಿಲ್ಲ. ಇದೊಂದು ಕುಟುಂಬ ಸದಸ್ಯರೆಲ್ಲ ಸೇರಿ ನೋಡುವಂಥ ಚಿತ್ರ ಎಂದರು.
ಈ ಚಲನಚಿತ್ರದಲ್ಲಿ ರಂಗಭೂಮಿ ಕಲಾವಿದರೇ ಹೆಚ್ಚಿದ್ದಾರೆ. ರಾಜ್ಯದಾದ್ಯಂತ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪರಭಾಷೆಗಳಲ್ಲಿಯೂ ಚಿತ್ರದ ಡಬ್ಬಿಂಗ್‌ಗೆ ಮಾತುಕತೆ ನಡೆಯುತ್ತಿದೆ. ಕಳೆದ ಕೆಲ ವರ್ಷಗಳಿಂದ ತಾವು ನಟಿಸಿದ್ದ ಇತರ ಚಿತ್ರಗಳು ನಿರೀಕ್ಷಿತ ಮಟ್ಟಕ್ಕೆ ನೀಡದ ಯಶಸ್ಸನ್ನು ಉಗ್ರಂ ನೀಡಿದೆ ಎಂದರು.
ಬಿಗ್ ಬಾಸ್ ಖ್ಯಾತಿಯ ನಟ ತಿಲಕ್ ಮಾತನಾಡಿ, ಬಿಗ್ ಬಾಸ್ ಮುಂಚಿನಿಂದಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿದೆ. ಬಿಗ್ ಬಾಸ್ ನಂತರವೂ ಸಾಕಷ್ಟು ಉತ್ತಮ ಅವಕಾಶಗಳು ತಮಗೆ ಬಂದಿವೆ. ಉಗ್ರಂನಲ್ಲಿ ಬಾಲನ ಪಾತ್ರ ಹೆಚ್ಚು ಸಂತಸ ನೀಡಿದೆ ಎಂದು ಹೇಳಿದರು. ನಾಯಕ ನಟಿ ಹರಿಪ್ರಿಯಾ ಮತ್ತಿತರರು ಹಾಜರಿದ್ದರು.