ಹೊರಟ್ಟಿ ಧಾರವಾಡದಿಂದ ಸ್ಪರ್ಧಿಸಲಿ: ಕೃಷ್ಣಪ್ಪ
ಹುಬ್ಬಳ್ಳಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಈ ಭಾಗವನ್ನು ಜೆಡಿಎಸ್ ಗಂಭೀರವಾಗಿ ಪರಿಗಣಿಸಲಿದೆ ಎಂಬ ಸಂದೇಶವನ್ನು ಮತದಾರರಿಗೆ ತಲುಪಿಸಬಹುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಹೇಳಿದರು.
ಭಾನುವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಮತ್ತು ಧಾರವಾಡ ಗ್ರಾಮೀಣ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಪಕ್ಷದ ಹಿನ್ನಡೆ ಕುರಿತು ಮಾಜಿ ಸಚಿವ ಹೊರಟ್ಟಿ ಅವರು ಹೃದಯ ಬಿಚ್ಚಿ ಸ್ಪಷ್ಟ ಮಾತುಗಳಲ್ಲಿ ಇರುವ ಸಮಸ್ಯೆಯನ್ನು ಎತ್ತಿ ತೋರಿಸಿದ್ದಾರೆ. ಚುನಾವಣಾ ಕಣಕ್ಕೆ ಇಳಿದರೆ ಈ ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿ ಮಾಡಬಹುದು ಎಂದು ಹೇಳಿದರು.
ರಾಜ್ಯದಲ್ಲಿ ಚುನಾವಣೆ ಪೂರ್ವ ಏನೂ ಇಲ್ಲದ ಜೆಡಿಎಸ್ ಈಗ ಮತ್ತೆ ನೆಲೆ ಕಂಡುಕೊಳ್ಳುತ್ತಿದೆ. ತೃತೀಯ ರಂಗದ ಕುರಿತು ನಡೆಯುತ್ತಿರುವ ಚರ್ಚೆಗಳ ಫಲವಾಗಿ ರಾಷ್ಟ್ರ ರಾಜಕಾರಣದಲ್ಲಿ ಜೆಡಿಎಸ್ ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿಸಿದರು.
ಪಕ್ಷವನ್ನು ಸಂಘಟಿತಗೊಳಿಸಲು ಜಿಲ್ಲಾ ಕೇಂದ್ರದಲ್ಲಿ ಜೆಡಿಎಸ್ ಕಚೇರಿಗಳನ್ನು ತೆರೆಯಲಾಗುವುದು. ಉತ್ತರ ಕರ್ನಾಟಕದತ್ತ ಲಕ್ಷ್ಯ ವಹಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಅನೇಕ ತಪ್ಪುಗಳು ಆಗಿರುವುದು ನಿಜ ಎಂದು ಒಪ್ಪಿಕೊಂಡ ಅವರು, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕರಾದ, ಎಂ.ಎಸ್. ಅಕ್ಕಿ, ಅಲ್ಕೋಡ ಹನುಮಂತಪ್ಪ, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಮುಜಾಹಿದ್ ಮುಜಾವರ್, ಫಮಿದಾ ಕಿಲ್ಲೇದಾರ, ಪಕ್ಷದ ಸಂಘಟನೆ, ಎದುರಿಸುತ್ತಿರುವ ಸಮಸ್ಯೆ, ಆಗಬೇಕಿರುವ ಕೆಲಸಗಳ ಕುರಿತು ಮಾತನಾಡಿದರು. ಪಾಲಿಕೆ ಸದಸ್ಯ ಮತ್ತು ಹು-ಧಾ ಮಹಾನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಾಜಣ್ಣ ಕೋರವಿ ಪ್ರಾಸ್ತಾವಿಕ ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಹಿನ್ನಡೆ ಕುರಿತು ಮಾಜಿ ಸಚಿವ ಹೊರಟ್ಟಿ ಹೃದಯ ಬಿಚ್ಚಿ ಸ್ಪಷ್ಟ ಮಾತುಗಳಲ್ಲಿ ಇರುವ ಸಮಸ್ಯೆಯನ್ನು ಎತ್ತಿ ತೋರಿಸಿದ್ದಾರೆ. ಚುನಾವಣಾ ಕಣಕ್ಕೆ ಇಳಿದರೆ ಈ ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿ ಮಾಡಬಹುದು. ರಾಜ್ಯದಲ್ಲಿ ಚುನಾವಣೆ ಪೂರ್ವ ಏನೂ ಇಲ್ಲದ ಜೆಡಿಎಸ್ ಈಗ ಮತ್ತೆ ನೆಲೆ ಕಂಡುಕೊಳ್ಳುತ್ತಿದೆ. ತೃತೀಯ ರಂಗದ ಕುರಿತು ನಡೆಯುತ್ತಿರುವ ಚರ್ಚೆಗಳ ಫಲವಾಗಿ ರಾಷ್ಟ್ರ ರಾಜಕಾರಣದಲ್ಲಿ ಜೆಡಿಎಸ್ ಪ್ರಮುಖ ಪಾತ್ರವಹಿಸಲಿದೆ.
- ಎ. ಕೃಷ್ಣಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ
ತೃತೀಯ ರಂಗದಿಂದ ಜೆಡಿಎಸ್ಗೆ ಬಲ: ಎ. ಕೃಷ್ಣಪ್ಪ
ಹುಬ್ಬಳ್ಳಿ: ತೃತೀಯ ರಂಗ ರಚನೆಯಾದಲ್ಲಿ ರಾಜ್ಯದಲ್ಲಿ ಜೆಡಿಎಸ್ ಬಲ ಹೆಚ್ಚಲಿದೆ ಎಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ, ತೃತೀಯ ರಂಗದೊಂದಿಗೆ ಗುರುತಿಸಿಕೊಂಡಿರುವ ಪಕ್ಷಗಳಿಗೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಒಂದೆರಡು ಸ್ಥಾನ ಬಿಟ್ಟು ಕೊಡಲಾಗುವುದು ಎಂದು ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೃತೀಯ ರಂಗ ಮಾತ್ರ ದೇಶಕ್ಕೆ ಒಳ್ಳೆಯ ಆಡಳಿತ ನೀಡಲು ಸಾಧ್ಯ. ದೇವೇಗೌಡರ ನೇತೃತ್ವದಲ್ಲಿ ತೃತೀಯ ರಂಗ ಬಲಗೊಳ್ಳಲಿದೆ. ಒಂದೊಮ್ಮೆ ತೃತೀಯ ರಂಗದೊಂದಿಗೆ ಹೊಂದಾಣಿಕೆಯಾದಲ್ಲಿ ರಾಜ್ಯದಲ್ಲಿ ಪಕ್ಷ 18ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪಟ್ಟಿ ಬಿಡುಗಡೆ: ಲೋಕಸಭೆ ಅಭ್ಯರ್ಥಿಗಳ ಪಟ್ಟಿಯನ್ನು ಇದೇ 8ರಿಂದ 10ನೇ ತಾರೀಖಿನೊಳಗಾಗಿ ಬಿಡುಗಡೆ ಮಾಡಲಾಗುವುದು. 28 ಕ್ಷೇತ್ರದಲ್ಲಿಯೂ (ಹೊಂದಾಣಿಕೆ ಸೇರಿ) ಜೆಡಿಎಸ್ ಸ್ಪರ್ಧೆಗಿಳಿಯಲಿದೆ. ಮೊದಲ ಹಂತದಲ್ಲಿ 15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಮುಖಂಡರು ತಮ್ಮ ಸಂಪರ್ಕದಲ್ಲಿದ್ದು ಜೆಡಿಎಸ್ ಸೇರ್ಪಡೆಯ ಇಂಗಿತ ವ್ಯಕ್ತಪಡಿಸಿದ್ದಾರೆ. ಇವರೆಲ್ಲರ ಸೇರ್ಪಡೆಯ ಬಳಿಕ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದ ಕೃಷ್ಣಪ್ಪ, ಜೆಡಿಎಸ್ ಸೇರ್ಪಡೆಯಾಗಲಿರುವ ಮುಖಂಡರ ಹೆಸರು ತಿಳಿಸಲು ನಿರಾಕರಿಸಿದರು.
ಕಲ್ಯಾಣ ಕಾರ್ಯಗಳ ಪ್ರಣಾಳಿಕೆ: ಜೆಡಿಎಸ್ ತನ್ನ ಪ್ರಣಾಳಿಕೆಯನ್ನು ಇಷ್ಟರಲ್ಲಿಯೇ ಬಿಡುಗಡೆ ಮಾಡಲಿದೆ. ಬಡವರಿಗೆ, ಮಹಿಳೆಯರಿಗೆ ನೆರವು ನೀಡುವುದರ ಜತೆಗೆ ಕಲ್ಯಾಣ ಕಾರ್ಯಗಳು ಪ್ರಣಾಳಿಕೆಯಲ್ಲಿರುತ್ತದೆ. 2 ಸ್ಥಾನಗಳಲ್ಲಿ ಮಹಿಳೆಯರು ಸ್ಪರ್ಧೆಗಿಳಿಯಲಿದ್ದಾರೆ. ಶಿವಮೊಗ್ಗ ಕ್ಷೇತ್ರದಿಂದ ಬಂಗಾರಪ್ಪ ಕುಟುಂಬದವರು ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದರು.
ಮಾಜಿ ಸಚಿವ ಬಸವರಾಜ ಹೊರಟ್ಟಿ, ಎನ್.ಎಚ್. ಕೋನರಡ್ಡಿ, ರಾಜಣ್ಣ ಕೊರವಿ, ಎಂ.ಎಸ್. ಅಕ್ಕಿ ಮತ್ತಿತರರು ಇದ್ದರು.
ಜೆಡಿಎಸ್ನಲ್ಲಿ ಕಾಲೆಳೆಯುವವರೆ ಜಾಸ್ತಿ...
ಕೆಲವರು ಪ್ರೀತಿಯಿಂದ ಲೋಕಸಭೆ ಚುನಾವಣೆಗೆ ನಿಲ್ಲಿ ಎಂದು ಹೇಳಿದರೆ, ಇನ್ನೂ ಕೆಲವರು ಪ್ರೀತಿಯಿಂದ ಚುನಾವಣೆ ಕಣಕ್ಕೆ ಇಳಿಸಿ ಕಾಲೆಳೆಯುವ ಕೆಲಸ ಮಾಡುತ್ತಾರೆ ಎಂದು ಹೇಳಿದ್ದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ.
ಭಾನುವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಜಾತಿ ಮತ್ತು ಹಣ ಬಲ ಎಂದು ಹೇಳಲಾಗುತ್ತಿದೆ. ನನ್ನ ರಾಜಕೀಯ ಜೀವನದಲ್ಲಿ ಈ ಎರಡು ಸಂಗತಿಗಳು ನಗಣ್ಯ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ನಾನೇ ಖುದ್ದಾಗಿ ಕಳೆದ ಹಲವು ಚುನಾವಣೆಗಳಲ್ಲಿ ಅಭ್ಯರ್ಥಿಗಳಿಗೆ ಪಕ್ಷದಿಂದ ಹಣ ನೀಡಿದ್ದೇನೆ. ಇನ್ನೂ ಜಾತಿ ಬಲದ ಬಗ್ಗೆ ಹೇಳಬೇಕು ಎಂದರೆ ಅನೇಕ ಕಡೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಜಾತಿ ಬಲವಿದ್ದರೂ ಸೋಲು ಅನುಭವಿಸಿದ್ದಾರೆ. ಒಟ್ಟಾರೆಯಾಗಿ ಪಕ್ಷದ ಗೆಲವಿಗೆ ಬೇಕಿರುವುದು ಕಾರ್ಯಕರ್ತರ ಶ್ರಮ ಮತ್ತು ನಾಯಕರ ಮಧ್ಯೆ ಹೊಂದಾಣಿಕೆ. ಈ ಎರಡರ ಪೈಕಿ ನಾಯಕರ ಮಧ್ಯೆ ಹೊಂದಾಣಿಕೆ ಪಕ್ಷದಲ್ಲಿಲ್ಲ. ನಮ್ಮ ಪಕ್ಷದವರೇ ನಮ್ಮನ್ನು ತುಳಿಯುವ ಯತ್ನ ಮಾಡುತ್ತಾರೆ. ನನ್ನ ರಾಜಕೀಯ ಜೀವನಕ್ಕೆ ಬಂದರೆ ನನ್ನ ರಾಜಕೀಯವೇ ಬೇರೆ ನನ್ನ ವ್ಯವಹಾರವೇ ಬೇರೆ. ಹೀಗಾಗಿ ನಾನು ಯಾರಿಗೂ ಅನಿವಾರ್ಯವೂ ಅಲ್ಲ. ನನಗೆ ಬೇರೆ ಯಾರೂ ಅನಿವಾರ್ಯವೂ ಅಲ್ಲ ಎಂದರು.
ಅಭ್ಯರ್ಥಿಗಳ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವವರ ಕೊರತೆ ಪಕ್ಷದಲ್ಲಿದೆ. ಇದೇ ಕಾರಣಕ್ಕೆ ಚುನಾವಣೆ ಎದುರಿಸಲು ಹೆದರಿಕೆ ಇದೆ. ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅವರ ಗೆಲವನ್ನು ಉದಾಹರಿಸಿದ ಅವರು, ಅವರಿಗೆ ಜಾತಿ ಬಲವಿಲ್ಲ. ಎರಡು ಚುನಾವಣೆಗಳಲ್ಲಿ ಸೋತರೂ ಎದೆಗುಂದದೇ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕ್ಷೇತ್ರದಲ್ಲಿ ಕೆಲಸ ಮಾಡಿದ ಪರಿಣಾಮ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೇರೆ ಜಾತಿ ಮತದಾರರು ಅವರ ಕೈಹಿಡಿದು ಗೆಲ್ಲಿಸಿದ್ದಾರೆ ಎಂದರು.