ದೇಸೀಯತೆಯಿಂದ ಆರ್ಥಿಕಾಭಿವೃದ್ಧಿ ಸಾಧ್ಯ
ಹುಬ್ಬಳ್ಳಿ: ನಾವು ದೇಸೀಯ ವಸ್ತುಗಳನ್ನು ಬಿಟ್ಟು ಪಾಶ್ಚಿಮಾತ್ಯ ಭೋಗ ವಸ್ತುಗಳ ಬೆನ್ನು ಹತ್ತಿರುವುದರಿಂದ ದೇಶದ ಆರ್ಥಿಕ ಸ್ಥಿತಿ ಏರುಪೇರಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಕ್ತಾರ ಶಂಕರಾನಂದ ಹೇಳಿದರು.
ಇಲ್ಲಿನ ಕನಕದಾಸ ಶಿಕ್ಷಣ ಸಮಿತಿಯ ಕೆಎಸ್ಎಸ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕನಕ ಉತ್ಸವ-14 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಹಾಗೂ ಅರ್ಥಶಾಸ್ತ್ರದೊಂದಿಗೆ ನೇರ ಸಂಬಂಧವಿದೆ. ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಅನುಸರಿಸುವ ಜತೆಗೆ ದೇಸಿಯ ವಸ್ತುಗಳನ್ನು ಖರೀದಿಸಿದರೆ ದೇಸಿ ಮಾರುಕಟ್ಟೆಗೆ ಜೀವ ಬರುತ್ತದೆ. ಈ ನಿಟ್ಟಿನಲ್ಲಿ ನಾವು ಬದಲಾವಣೆ ತಂದುಕೊಳ್ಳಬೇಕು ಎಂದರು. ಚಾಣಕ್ಯನ ಆರ್ಥಿಕ ನೀತಿ ನಮ್ಮ ದೇಶದಲ್ಲಿ ಅಳವಡಿಸಿಕೊಳ್ಳಬೇಕಿತ್ತು, ಆದರೆ ಜರ್ಮನ್ ದೇಶದಲ್ಲಿ ಚಾಣಕ್ಯ ನೀತಿಯನ್ನು ಅನುಸರಿಸಲಾಗಿದೆ. ನಾವು ನಮ್ಮತನವನ್ನು ಮರೆತರೆ ಉಳಿಗಾಲವಿಲ್ಲ. ಈ ಸಂಗತಿಯನ್ನು ಅರಿತು ಸರಿದಾರಿಯಲ್ಲಿ ಸಾಗಬೇಕಿದೆ ಎಂದರು.
ಶಿಲ್ಪಾ ಶೆಟ್ಟರ್ ಮಾತನಾಡಿ, ಶಿಕ್ಷಣದ ಮೂಲಕ ಪರಿವರ್ತನೆ ಸಾಧ್ಯ. ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದರು. ಡಾ. ಎನ್.ಎ. ಚರಂತಿಮಠ ಮಾತನಾಡಿ, ಇಂದು ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಆದರೆ ಆ ಅವಕಾಶಗಳನ್ನು ಬಳಸಿಕೊಳ್ಳುವ ಕಲೆ ವಿದ್ಯಾರ್ಥಿಗಳಲ್ಲಿರಬೇಕು ಎಂದರು. ವಿದುಲಾ ಹಳದೀಪುರ ಮಾತನಾಡಿ, ಪಾಶ್ಚಿಮಾತ್ಯ ಅನುಕರಣೆಯಿಂದ ಬದುಕು ಹಾಳಾಗುತ್ತದೆ. ನಮ್ಮತನ ಅಳವಡಿಸಿಕೊಂಡಾಗ ಮಾತ್ರ ಸ್ವಚ್ಛ ಸುಂದರ ಬದುಕು ಸಾಗಿಸಲು ಸಾಧ್ಯ. ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ವಾಲದಿರುವಂತೆ ಪಾಲಕರು ಕಾಳಜಿ ವಹಿಸಬೇಕು ಎಂದರು. ರವಿ ದಂಡಿನ, ವಿಜಯಲಕ್ಷ್ಮಿ ದಂಡಿನ, ಆಕಾಶ ಹಬೀಬ, ಶ್ವೇತಾ, ಪ್ರವೀಣ ಜಕ್ಕಲಿ, ಗಂಗಾಧರ ಸಿಂದಗಿ ಮತ್ತಿತರರಿದ್ದರು.