ಕಳಪೆ ಕಾಮಗಾರಿ: ವಿನಯಕುಮಾರ ಸೊರಕೆ ಅಸಮಾಧಾನ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವ ಒಳಚರಂಡಿ ಹಾಗೂ ತ್ಯಾಜ್ಯ ಶುದ್ಧೀಕರಣ ಘಟಕ ಬರುವ ಮೇ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ, ಅವಳಿ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ನೃಪತುಂಗ ಬೆಟ್ಟದಲ್ಲಿನ ಜಲಸಂಗ್ರಹಗಾರ, ಮಾಧವ ನಗರದ ನಿರಂತರ ನೀರು ಪೂರೈಕೆ ವಾರ್ಡ್, ಕಾರ್ಮಿಕ ನಗರ, ಜನ್ನತ ನಗರ, ಗಬ್ಬೂರ ಬೈಪಾಸ್ ಬಳಿಯ ಎಸ್‌ಟಿಪಿ ಘಟಕ, ಬಿಆರ್‌ಟಿಎಸ್ ಡಿಪೋ, ಕನ್‌ವಿನ್‌ಶೆನ್ ಸೆಂಟರ್ ಹಾಗೂ ಮತ್ತಿತರ ಸ್ಥಳಗಳನ್ನು ಪರಿಶೀಲಿಸಿದ ನಂತರ ಸಚಿವ ಸೊರಕೆ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಅವಳಿ ನಗರದಲ್ಲಿ ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳು ತಮಗೆ ತೃಪ್ತಿ ನೀಡಿಲ್ಲ. ವಿವಿಧ ಕಾಮಗಾರಿಗಳಲ್ಲಿ ಗುಣಮಟ್ಟ ನಿರೀಕ್ಷಿತ ಮಟ್ಟಕ್ಕೆ ಇಲ್ಲ. ಇನ್ನೂ ಕೆಲವೆಡೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಕುರಿತು ತಾವು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಜೊತೆಗೆ ತ್ವರಿತಗತಿ ಅಳವಡಿಸಿಕೊಳ್ಳುವುದಾಗಿ ಆದೇಶಿಸಲಾಗಿದೆ ಎಂದರು.
2015ರ ಮಾರ್ಚ್‌ನೊಳಗೆ ಅವಳಿ ನಗರದ ಮಧ್ಯೆ ಬಿಆರ್‌ಟಿಎಸ್ ಕಾಮಗಾರಿ ಪೂರ್ಣಗೊಳ್ಳಲಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಬಿಆರ್‌ಟಿಎಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಕಾಟನ್ ಮಾರ್ಕೆಟ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕನ್‌ವಿನ್‌ಶೆನ್ ಸೆಂಟರ್ ಕಾಮಗಾರಿ ಇನ್ನೂ 45 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ರು. 1,200 ಕೋಟಿ ವೆಚ್ಚದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ವಿಸ್ತರಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದ ಸಚಿವ ಸೊರಕೆ, ತ್ಯಾಜ್ಯ ಶುದ್ಧೀಕರಣ ಘಟಕದ ಹೆಸರಿನಲ್ಲಿ ಹೆಚ್ಚಿನ ಭೂಮಿ ಖರೀದಿಸಲು ಅವಕಾಶ ನೀಡುವುದಿಲ್ಲ ಎಂದರು.
ಕೇಶ್ವಾಪುರ ಸರ್ವೋದಯ ವೃತ್ತ ಬಳಿ ಸಾರ್ವಜನಿಕ ಪಾವತಿ ನಳಕ್ಕೆ ಸಚಿವ ಸೊರಕೆ, ಮಾಜಿ ಸಿಎಂ ಜಗದೀಶ ಶೆಟ್ಟರ ಚಾಲನೆ ನೀಡಿದರು.