ಪ್ರತಿಕ್ರಿಯೆ ನೀಡದ ನ್ಯಾಯಾಧಿಕರಣ ಮೌಲ್ಯಮಾಪಕರು!
ನವದೆಹಲಿ: ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಒದಗಿಸುವ ಕಳಸಾ ಬಂಡೂರಿ ಯೋಜನೆಗಾಗಿ ಮಹದಾಯಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವುದರಿಂದ ಗೋವಾ ರಾಜ್ಯದ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆಯೇ ಎಂಬ ವಿಷಯದ ಬಗ್ಗೆ ಮಹದಾಯಿ ನ್ಯಾಯಾಧಿಕರಣದ ಮೌಲ್ಯಮಾಪಕರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.
ಜತೆಗೆ ಈ ಯೋಜನೆ ಜಾರಿಯಿಂದ ಗೋವಾ ರಾಜ್ಯಕ್ಕೆ ಕುಡಿಯುವ ನೀರಿನ ತೊಂದರೆ ಆಗುತ್ತದೆಯೇ ಎಂಬ ವಿಷಯದ ಬಗ್ಗೆಯೂ ಏನನ್ನೂ ಹೇಳಿಲ್ಲ. ಆದರೆ, ಮಹದಾಯಿ ವನ್ಯಧಾಮದ ಕೆಳ ಹರಿವಿನ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದ್ದಾರೆ.
ಗೋವಾ ರಾಜ್ಯದ ಮನವಿ ಮೇರೆಗೆ ನ್ಯಾಯಾಧಿಕರಣದ ಪ್ರತಿನಿಧಿಗಳು ಡಿಸೆಂಬರ್ ತಿಂಗಳಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಫೆಬ್ರವರಿ 14ರಂದು ಸ್ಥಳ ಪರಿಶೀಲನಾ ವಿಸ್ತೃತ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಪೂರೈಸಲು ರೂಪಿಸಲಾಗುತ್ತಿರುವ ಕಳಸಾ ಬಂಡೂರಿ ಯೋಜನೆಗಾಗಿ ನಿರ್ಮಿಸುತ್ತಿರುವ ಸಂಪರ್ಕ ಕಾಲುವೆ ನಿರ್ಮಾಣ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಆದರೆ, ಉದ್ದೇಶಿತ ಅಣೆಕಟ್ಟೆಗಳು ನಿರ್ಮಾಣವಾಗುವವರೆಗೂ ಇದನ್ನು ಬಳಸಲಾಗದು ಎಂದು ತಿಳಿಸಲಾಗಿದೆ. ಈ ನಡುವೆ, ಮಂಗಳವಾರ ಮಹದಾಯಿ ನ್ಯಾಯಾಧಿಕರಣದ ವಿಚಾರಣೆ ನಡೆಯಿತು. ಆದರೆ, ಕಳಸಾ- ಬಂಡೂರಿ ಯೋಜನೆ ವಿರೋಧಿಸಿ ಗೋವಾ ಸರ್ಕಾರ ಮತ್ತೊಂದು ಅರ್ಜಿ ಸಲ್ಲಿಸಿದ್ದರಿಂದ ಅದನ್ನು ಪರಿಗಣಿಸುವ ಸಲುವಾಗಿ ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಲಾಯಿತು. ಗೋವಾ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ನಡೆಸಲು ನ್ಯಾಯಾಧಿಕರಣ ಬಯಸಿತಾದರೂ ಗೋವಾ ಸರ್ಕಾರ ತನ್ನ ಅರ್ಜಿಗೆ ಮತ್ತೊಂದು ಪ್ಯಾರಾವನ್ನು ಹೊಸದಾಗಿ ಸೇರಿಸುವುದಾಗಿ ತಿಳಿಸಿತು. ಆದರೆ, ಗೋವಾ ಸೇರಿಸ ಬಯಸಿರುವ ವಿಷಯಗಳು ನ್ಯಾಯಾಧಿಕರಣದ ವಿಚಾರಣಾ ವ್ಯಾಪ್ತಿ ಮೀರಿರುವುದರಿಂದ ಅದಕ್ಕೆ ಅವಕಾಶ ನೀಡಬಾರದು ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕರ್ನಾಟಕವು ಬೇಡ್ತಿ ಮತ್ತಿತರ ನದಿಗಳಿಂದ ಪರ್ಯಾಯ ಜಲ ಮೂಲಗಳನ್ನು ಬಳಸಿಕೊಳ್ಳಬಹುದೆಂಬ ಅಂಶಗಳನ್ನು ಗೋವಾ ಈ ಹಿಂದೆಯೇ ಕೈ ಬಿಟ್ಟಿರುವುದರಿಂದ ಮತ್ತೆ ಅದನ್ನು ಸೇರಿಸುವುದು ಸರಿಯಲ್ಲ. ಅದು ನ್ಯಾಯಾಧಿಕರಣ ವಿಚಾರಣಾ ವ್ಯಾಪ್ತಿಯಲ್ಲೂ ಇಲ್ಲ ಎಂದರು.