ನಕಲಿ ಆಯುರ್ವೇದ ಉತ್ಪನ್ನ ಮಾರಾಟ: ಆರು ಜನರ ಬಂಧನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 5
ನಕಲಿ ಆಯುರ್ವೇದಿಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಯೊಂದರ ಮೇಲೆ ಉಪನಗರ ಠಾಣೆ ಪೊಲೀಸರು ದಾಳಿ ನಡೆಸಿ, 6 ಜನರನ್ನು ಬಂಧಿಸಿ ಲಕ್ಷಾಂತರ ರು. ಮೌಲ್ಯದ ನಕಲಿ ಆಯುರ್ವೇದಿಕ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ನೀಲಿಜಿನ್ ರಸ್ತೆಯ ಯುರೇಕಾ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿನ ಲಕ್ಷ್ಮಿ ಆಯುರ್ವೇದ ಎಂಬ ಹೆಸರಿನ ಅಂಗಡಿ ಮೇಲೆ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದರು.
ದಾಳಿ ಕಾಲಕ್ಕೆ ನಕಲಿ ಆಯುರ್ವೇದ ಔಷಧಿಯ 150 ಬಾಟಲಿಗಳು ಸೇರಿ ಲಕ್ಷಾಂತರ ರು. ಮೌಲ್ಯದ ಕಲಬೆರಕೆ ಮಾಡಿದ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್ ಸಚಿನ್ ಚಲವಾದಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಮನೆಗಳ್ಳತನ: ಮನೆ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು, ನಗದು ಸೇರಿದಂತೆ ರು. 8,300 ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಬೆಂಡಿಗೇರಿ ಠಾಣೆ ವ್ಯಾಪ್ತಿಯ ಸೋನಿಯಾ ಗಾಂಧಿನಗರದಲ್ಲಿ ನಡೆದಿದೆ.
ಗೈಬುಸಾಬ ಮುಲ್ಲಾ ಎಂಬುವರ ಮನೆಯಲ್ಲೇ ಈ ಕಳ್ಳತನ ನಡೆದಿದೆ. ಘಟನಾ ಸ್ಥಳಕ್ಕೆ ಇನ್‌ಸ್ಪೆಕ್ಟರ್ ತಾಯಪ್ಪ ದೊಡ್ಡಮನಿ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.