ಸಾಧನೆಗೆ ಅನುಭವಗಳೇ ಗುರು : ಜಯಶ್ರೀ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 5
ಅನುಭವಗಳನ್ನು ಬೆನ್ನಿಗೆ ಕಟ್ಟಿಕೊಂಡು ಅದರ ಅಣತಿಯಂತೆ ಸಾಗುವುದೇ ಭಾರತೀಯ ಪರಂಪರೆ ಎಂದು ಗಾಯಕಿ, ನಟಿ ಹಾಗೂ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಹೇಳಿದರು.
ಇಲ್ಲಿಯ ಕರ್ನಾಟಕ ಕಾಲೇಜಿನ ವಿದ್ಯಾರ್ಥಿನಿಯರ ಕಾವೇರಿ ವಸತಿ ನಿಲಯದ ವಾರ್ಷಿಕೋತ್ಸವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಅನುಭವಗಳು ಸಾಧನೆಯ ಹಾದಿಯಲ್ಲಿ ಗುರು ಇದ್ದಂತೆ. ನಮ್ಮ ನೆನಪು ಸದಾ ನಮ್ಮ ಜತೆಯಲ್ಲಿದ್ದರೆ ಸಾಧನೆ ನಮಗೆ ಅತಿ ಸುಲಭ, ನಾನೇಕಾಗಬೇಕೆಂದು ನಿರ್ಧರಿಸಿ ಅನುಭವಗಳೊಂದಿಗೆ ರಾಜಿ ಮಾಡಿಕೊಂಡು ಮುನ್ನ್ನಡೆದರೆ ಸಾಧಕರಾಗಲು ಸಾಧ್ಯ ಎಂದು ತಿಳಿಸಿದರು.
ಕ್ಲಿಷ್ಟ ಪರಸ್ಥಿತಿಯಲ್ಲೂ ಮಹಿಳೆ ಅವಕಾಶಗಳನ್ನು ಬಾಚಿಕೊಂಡು, ಗಟ್ಟಿಯಾಗಿ ನೆಲೆಯುರಿ ನಿಲ್ಲಬೇಕು. ಹೆಣ್ಣು ಅನಾದಿಕಾಲದಿಂದಲೂ ಸಮಾಜದ ಎರಡನೆಯ ಪ್ರಜೆಯಾಗಿದ್ದಳು. ಇಂದು ಅವೆಲ್ಲವನ್ನೂ ಮೆಟ್ಟಿ ನಿಂತಿದ್ದಾಳೆ. ಸಮಾಜ ಕ್ಷಿಪ್ರವಾಗಿ ಪ್ರಗತಿ ಹೊಂದ ಬೇಕಾದರೆ ಮಹಿಳೆಗೆ ಪ್ರಮುಖ ಸ್ಥಾನ ದೊರೆಯಬೇಕು. ಅದಕ್ಕಾಗಿ ಮಹಿಳೆ ಇಂದು ಸಮಾಜ ಬದಲಾವಣೆಗೆ ಸನ್ನದ್ಧಳಾಗಬೇಕಾದ ಅನಿವಾರ್ಯತೆ ಇದೆ ಎಂದರು.
ಕರ್ನಾಟಕ ಕಾಲೇಜಿನ ಪ್ರಾಚಾರ್ಯ ವಿ.ಎಚ್. ಅರಳಿ ಮಾತನಾಡಿ, ಶಿಕ್ಷಣವನ್ನ್ನು ಸಾಧನೆಗೆ ಮಾತ್ರ ಉಪಯೋಗಿಸಿಕೊಳ್ಳದೆ ಉತ್ತಮ ನಾಗರಿಕರಾಗಲು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ವಿವಿಯ ಡೀನ್ ಡಾ. ಚಂದ್ರಶೇಖರ ಹುಣಸ್ಯಾಳ, ಐಎಎಸ್ ಪ್ರೊಬೇಷನರಿ ಅಧಿಕಾರಿ ಚಾರುಲತಾ ಸೋಮಾಲ, ಜ್ಯೋತಿ ಹಳೇಗೌಡರ, ಅರುಣ ಹಳ್ಳಕೇರಿ, ವಿ.ಶಾರದಾ, ಗೀತಾ ಸತರಡ್ಡಿ ಮತ್ತಿತರರಿದ್ದರು.