ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 7 Mar 2014, 10:37 am

ಹುಬ್ಬಳ್ಳಿ: ನಾಳೆ ಅಡುಗೆ, ಕೇಶಾಲಂಕಾರ ಸ್ಪರ್ಧೆ
ಹುಬ್ಬಳ್ಳಿ: ನವನಗರದ ಜಿಕೇನಕೊಪ್ಪದ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮ ಮತ್ತು ಚನ್ನವೀರ ಶರಣರ ಮಹಿಳಾ ವೇದಿಕೆಯಿಂದ ಮಾ. 8ರಂದು ಮಧ್ಯಾಹ್ನ 3ಕ್ಕೆ ಸಾಂಪ್ರದಾಯಿಕ ಅಡುಗೆ ಮತ್ತು ಕೇಶಾಲಂಕಾರ ಸ್ಪರ್ಧೆ ಆಯೋಜಿಸಲಾಗಿದೆ. ಸಾಂಪ್ರದಾಯಿಕ ಅಡುಗೆ ಮತ್ತು ಕೇಶಾಲಂಕಾರ ಸ್ಪರ್ಧೆಯನ್ನು 17-22 ವಯಸ್ಸಿನ ವಿದ್ಯಾರ್ಥಿನಿಯರಿಗೆ ಆಯೋಜಿಸಲಾಗಿದ್ದು, ನೋಂದಣಿ ಮತ್ತು ಮಾಹಿತಿಗೆ ಜಯಶ್ರೀ ಮಾಳಾಪುರ 8088088275, ಸುಲೋಚನಾ ಶಿವಕ್ಕನವರ 9731166280 ಸಂಪರ್ಕಿಸಿ. ಅಡುಗೆ ಮತ್ತು ಕೇಶಾಲಂಕಾರ ಸ್ಪರ್ಧೆ ಅಂದು ಮಧ್ಯಾಹ್ನ 3ಕ್ಕೆ ಚನ್ನವೀರ ಶರಣರ ಅಂಧರ ಕಲ್ಯಾಣಾಶ್ರಮದಲ್ಲಿ ನಡೆಯಲಿದೆ.
ಭಾರತೀಯ ತಂಡಕ್ಕೆ ವೀರೇಗೌಡರು ಆಯ್ಕೆ
ಹುಬ್ಬಳ್ಳಿ: ಮಲೇಷಿಯಾದ ಕೌಲಾಲಂಪುರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸೇಪಕ್‌ಟಕ್ರಾ ಸೂಪರ್ ಸೀರಿಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡದ ವ್ಯವಸ್ಥಾಪಕರಾಗಿ ವೀರೇಗೌಡರ ಅವರು ಆಯ್ಕೆಯಾಗಿದ್ದಾರೆ. ಭಾರತೀಯ ಸೇಪಕ್‌ಟಕ್ರಾ ಫೆಡರೇಷನ್ ಆಫ್ ಇಂಡಿಯಾದಿಂದ ಕರ್ನಾಟಕದ ವೀರೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ ರಾಜ್ಯ ಸೇಪಕ್‌ಟಕ್ರಾ ಸಂಸ್ಥೆಯ ಸಹಕಾರ್ಯದರ್ಶಿ ಪಿ. ಮಂಜುನಾಥ ಅವರು ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿ: ನಾಳೆಚಾಯ್ ಪೆ ಚರ್ಚಾ
ಹುಬ್ಬಳ್ಳಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ 2ನೇ ಹಂತದ ಚಹಾದೊಂದಿಗೆ ಚರ್ಚೆ ಮತ್ತೆ ಶುರುವಾಗಲಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಮಹಿಳಾ ಸಬಲೀಕರಣವನ್ನು ಕೇಂದ್ರವಾಗಿಟ್ಟು ಮಾ. 8ರಂದು ಚರ್ಚೆ ನಡೆಯಲಿದೆ ಎಂದು ಮಹಾನಗರ ಜಿಲ್ಲಾ ಬಿಜೆಪಿ ಪ್ರಕಟಣೆ ತಿಳಿಸಿದೆ. ಹುಬ್ಬಳ್ಳಿ ವಿದ್ಯಾನಗರ ಬಿವಿಬಿ ಕಾಲೇಜ್ ಹಿಂಭಾಗದಲ್ಲಿ, ಗೋಪನಕೊಪ್ಪದ ಈಶ್ವರಿ ಟೀ ಸ್ಟಾಲ್‌ನಲ್ಲಿ, ಶಾಂತಿ ನಗರ ಚರ್ಚ್ ಬಳಿ, ಧಾರವಾಡ ಹಿಂದಿ ಪ್ರಚಾರ ಸಭಾ ಸಮೀಪದ ಸೃಷ್ಟಿ ಸಾಗರ ಹೊಟೇಲ್, ವರೂರ ಶಾರದಾ ಹೊಟೇಲ್‌ನಲ್ಲಿ, ತಡಸ ನಮೋ ಟೀ ಸ್ಟಾಲ್‌ನಲ್ಲಿ ಚರ್ಚೆ ನಡೆಯಲಿದೆ. ವಿಶೇಷವಾಗಿ ಈ ಬಾರಿ ಶೇ. 50ರಷ್ಟು 'ಚಹಾದೊಂದಿಗೆ ಚರ್ಚೆ' ಗ್ರಾಮೀಣ ಪ್ರದೇಶಗಳಲ್ಲಿ ನಡೆಯಲಿದೆ. ಸಂವಾದ ನಡೆಯುವ ಸ್ಥಳಗಳಲ್ಲಿ ಮಹಿಳಾ ಮೋರ್ಚಾ ಸಂವಾದ ನಡೆಯುವ ಸಿದ್ಧತೆ ನಡೆಸಿದೆ. ಪ್ರತಿ ಸಂವಾದದಲ್ಲಿ 150-200 ಮಹಿಳೆಯರು ಭಾಗವಹಿಸಲಿದ್ದು, ಸ್ಥಳೀಯ ಮಹಿಳಾ ನಾಯಕರು, ಸಾಧಕರು, ವಿಶೇಷ ಆಹ್ವಾನಿತರು ಉಪಸ್ಥಿತರಿರುತ್ತಾರೆ. ಒಂದೂವರೆ ಗಂಟೆಗಳ ಕಾಲ ನಡೆಯುವ ಈ ಸಂವಾದದಲ್ಲಿ ನರೇಂದ್ರ ಮೋದಿಯವರ ಅಭಿವೃದ್ಧಿಪರ ವಿಡಿಯೋಗಳನ್ನ್ನು ಪ್ರದರ್ಶಿಸಲಾಗುವದು. ಈ ಸಂವಾದದಲ್ಲಿ ಮಹಿಳೆಯರು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು. ಮಹಿಳೆಯರ ಸಬಲೀಕರಣ ಸಂಬಂಧಪಟ್ಟಂತೆ ಮೋದಿಯವರಿಗೆ ಪ್ರಶ್ನೆಗಳನ್ನ್ನು ಕೇಳಬಹುದು ಹಾಗೂ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ತಮ್ಮ ಸಲಹೆ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಲೆಗಳಿಗೆ ಅಧ್ಯಾತ್ಮ ಮೂಲ
ಧಾರವಾಡ: ಎಲ್ಲ ಕಲೆಗಳಿಗೆ ಮೂಲ ಅಧ್ಯಾತ್ಮ. ಆತ್ಮನ ಸಂಸ್ಕಾರ ಪ್ರತಿಭೆಯ ರೂಪದಲ್ಲಿದ್ದು, ವಿವಿಧ ಕಲೆಯಾಗಿ ಪ್ರಕಟವಾಗುತ್ತದೆ. ಇಂತಹ ಕಲೆಗಳು ಮನಸ್ಸಿನ ಎಲ್ಲ ಒತ್ತಡಗಳಿಂದ ಮುಕ್ತಗೊಳಿಸಿ, ಆನಂದ್ನ ನೀಡುತ್ತವೆ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಹೇಳಿದರು. ಧಾರವಾಡದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕಲೆಗಳು ಸಮಾಜದ ಪ್ರತಿಬಿಂಬ. ಅದು ಸಮಾಜದ ಜನರ ಗತಿಬಿಂಬ, ಮತಿಬಿಂಬವೂ ಹೌದು. ನಮ್ಮ ಕಲೆ ಸಂಸ್ಕೃತಿಯನ್ನ್ನು ನಾವೇ ಉಳಿಸಿ, ಬೆಳೆಸಬೇಕು. ಅನ್ಯ ಸಂಸ್ಕೃತಿಯನ್ನು ಗೌರವಿಸಬೇಕು. ನಮ್ಮದನ್ನ್ನು ಬಿಟ್ಟು ಅನ್ಯವನ್ನು ಆಚರಿಸುವುದು ಸರಿಯಲ್ಲ ಎಂದು ಸಲಹೆ ನೀಡಿದರು. ಸಿನಿಮಾ ನಟಿ, ನಾಟಕ ಕಲಾವಿದೆ ಡಾ. ಆರ್.ಟಿ. ರಮಾ ಮಾತನಾಡಿ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಿಶ್ಚಿತ ಸಮಯದಲ್ಲಿ ಪರಮಾತ್ಮನ ಚಿಂತನೆ ಮಾಡುವ ಅಭ್ಯಾಸದಿಂದ ಶರೀರ ಮತ್ತು ಮನಸ್ಸು ಆರೋಗ್ಯ ಪೂರ್ಣವಾಗಿ ಶಾಂತವಾಗಿರುತ್ತದೆ ಎಂದರು.  ಕವಿವಿ ಸಂಗೀತ ವಿಭಾಗದ ಮುಖ್ಯಸ್ಥ ವಿ.ಆರ್. ಹೂಗಾರ ಮಾತನಾಡಿದರು. ಬಿ.ಕೆ. ಯೋಗಿನಿ ನಿರೂಪಿಸಿ, ವಂದಿಸಿದರು.
ಮಹಿಳೆಯಿಂದ ಪತಿ, ಪೊಲೀಸರ ಮೇಲೆ ಹಲ್ಲೆ
ಹುಬ್ಬಳ್ಳಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ನ್ಯಾಯಾಲಯಕ್ಕೆ ಬಂದಿದ್ದ ಮಹಿಳೆಯೋರ್ವಳು ತನ್ನ ಗಂಡನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಮಹಿಳಾ ಠಾಣೆ ಇನ್‌ಸ್ಪೆಕ್ಟರ್, ಎಎಸ್‌ಐ ಮೇಲೆಯೂ ಹಲ್ಲೆ ನಡೆಸಿದ ಘಟನೆ ಇಲ್ಲಿನ ಕೋರ್ಟ್ ಆವರಣದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಹುಬ್ಬಳ್ಳಿಯ ಮಂಟೂರು ನಿವಾಸಿ ಗೀತಾ ಪರಮಾರ ಎಂಬಾಕೆ ತನ್ನ ಗಂಡ ಹೇಮರಾಜ ಹಾಗೂ ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ಚಲವಾದಿ, ಎಎಸ್‌ಐ ಮೇಲೆ ಹಲ್ಲೆ ನಡೆಸಿದ್ದಾರೆ. ಅಹಮ್ಮದಾಬಾದ್ ಮೂಲದ ಹೇಮರಾಜ ಹಾಗೂ ಗೀತಾ ದಂಪತಿ ನಡುವೆ 2007ರಲ್ಲಿ ಮನಸ್ತಾಪ ಉಂಟಾಗಿತ್ತು. ಇಬ್ಬರು ಕಿತ್ತಾಡಿಕೊಂಡ ಪರಿಣಾಮ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ಗುರುವಾರ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಲು ಇಬ್ಬರೂ ಬಂದಿದ್ದರು. ಅಲ್ಲದೆ ಸಾಕ್ಷಿ ನೀಡಲು ಇನ್‌ಸ್ಪೆಕ್ಟರ್ ಚಲವಾದಿ, ಎಎಸ್‌ಐ ಕೂಡ ಬಂದಿದ್ದರು. ಗೀತಾ ಅವರನ್ನು ಪೊಲೀಸರು ವಶಕ್ಕೆ ಪಡೆದು, ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮಾಡಳ್ಳಿ ನೇಮಕ
ನವಲಗುಂದ: ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಗ್ರಾಮೀಣ ಘಟಕ ಅಧ್ಯಕ್ಷರನ್ನಾಗಿ ತಾಲೂಕಿನ ಹಳ್ಳಿಕೇರಿಯ ಎಚ್.ವಿ. ಮಾಡಳ್ಳಿ ಅವರನ್ನು ನೇಮಿಸಿದ್ದು, ಪಕ್ಷದ ಸಂಘಟನೆಯಲ್ಲಿ ತೊಡಗುವಂತೆಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಮಾಡಳ್ಳಿ ಅವರಿಗೆ ನವಲಗುಂದ ಬ್ಲಾಕ್ ಅಧ್ಯಕ್ಷ ಆರ್.ಎಚ್. ಕೋನರಡ್ಡಿ, ಅಣ್ಣಿಗೇರಿ ಬ್ಲಾಕ್ ಅಧ್ಯಕ್ಷ ಶಿವಾನಂದ ಭೂಮಣ್ಣವರ ಅಭಿನಂದನೆ ಸಲ್ಲಿಸಿದ್ದಾರೆ.
ಸಂಶಿ: ವಿದ್ಯಾರ್ಥಿಗಳಿಂದ ಆಕಾಶಕಾಯ ವೀಕ್ಷಣೆ
ಕುಂದಗೋಳ: ತಾಲೂಕಿನ ಸಂಶಿ ಗ್ರಾಮದ ಗುರುದೇವ ಬ್ರಹ್ಮಾನಂದ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಅಗಸ್ತ್ಯ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಆಕಾಶ ವೀಕ್ಷಣೆ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಜರುಗಿತು. ಶಾಲಾ ಮಕ್ಕಳು ಬೆಳಗ್ಗೆ 4ಕ್ಕೆ ಆಗಮಿಸಿ ಆಕಾಶದಲ್ಲಿ ಶನಿ ಗ್ರಹ ಸೇರಿದಂತೆ ವಿವಿಧ ಆಕಾಶಕಾಯಗಳನ್ನು ವೀಕ್ಷಿಸಿದರು. ನಂತರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ವ್ಯಕ್ತಿತ್ವ ವಿಕಸನ ಹಾಗೂ ಆಕಾಶ ವೀಕ್ಷಣೆ ಕಾರ್ಯಕ್ರಮ ನಿರಂತರವಾಗಿ ಜರುಗಿದವು. ಸಂಜೆ 7ರಿಂದ ರಾತ್ರಿ 11.30 ಗಂಟೆವರೆಗೆ ಆಕಾಶ ವಿಕ್ಷಣೆ ಮಾಡಿ ಮಂಗಳ, ಗುರು, ನಿಹಾರಿಕೆ ವಿ12 ನಕ್ಷತ್ರಗಳನ್ನು ವಿದ್ಯಾರ್ಥಿಗಳು  ಕುತೂಹಲದಿಂದ ವೀಕ್ಷಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಎಸ್.ಬಿ. ಪಾಟೀಲ ಉಪಾಧ್ಯಕ್ಷ ಶಿವಾನಂದ ಪೂಜಾರ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ಆಕಾಶ ವೀಕ್ಷಣೆಯನ್ನು ಅಗಸ್ತ್ಯ ಸಂಸ್ಥೆಯ ಸಂಯೋಜಕ ಬೀರಪ್ಪ ಖಂಡೆಕಾರ ಮತ್ತು ಸೋಮಶೇಖರ ಗಂಗಾಯಿ ಆಕಾಶ ನಕ್ಷತ್ರಗಳ ವೀಕ್ಷಣೆ ಮಾಡಿಸಿ ಮಾಹಿತಿ ನೀಡಿದರು. ಶಿಕ್ಷಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement