ನಾಳೆ ಕೃಷ್ಣಾ ಹಾನಗಲ್ ಪುರಸ್ಕಾರ ಪ್ರದಾನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 7
ಡಾ. ಗಂಗೂಬಾಯಿ ಹಾನಗಲ್ ಅವರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕಲ್ ಫೌಂಡೇಶನ್, ಶ್ರೀಮತಿ ಕೃಷ್ಣಾ ಹಾನಗಲ್ ಸ್ಮರಣಾರ್ಥ ರಾಷ್ಟ್ರೀಯ ಪುರಸ್ಕಾರವನ್ನು ಪುಣೆಯ ಪಂ. ಶ್ರೀನಿವಾಸ ಭೀಮಸೇನ್ ಜೋಶಿಯವರಿಗೆ ನೀಡಲಿದೆ ಎಂದು ಫೌಂಡೇಶನ್ ಮುಖ್ಯಸ್ಥ ಮನೋಜ ಹಾನಗಲ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿಯು ರು. 10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ. ಮಾ. 9ರಂದು ಸಂಜೆ 5 ಗಂಟೆಗೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿವಿಯ ಉಪಕುಲಪತಿ ಡಾ. ಎಂ. ಬಸವಣ್ಣ, ಪ್ರಾದೇಶಿಕ ಆಯುಕ್ತ ವಿ. ಬಿ. ಪಾಟೀಲ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಡಿ. ಹಿರೇಗೌಡರ ಮತ್ತಿತರರು ಪಾಲ್ಗೊಳ್ಳುವರು.
ಸಮಾರೋಪ ಸಮಾರಂಭದಲ್ಲಿ ಸೋನಾ ಲೇಡೀಸ್ ಕ್ಲಬ್ನ 100 ಸದಸ್ಯರು ಸಮೂಹ ಗಾಯನ ಪ್ರಸ್ತುತ ಪಡಿಸುವರು. ಡಾ. ಸುಲಭ ದತ್ತ, ಮೀನಾ ಫಾತಕಫೇಕರ್, ಶ್ರೀನಿವಾಸ ಜೋಶಿ ಗಾಯನ ಪ್ರಸ್ತುತ ಪಡಿಸುವರು. ಮಾಣಿಕ ಮುಂಡೆ, ಸುಖದ್ ಮುಂಡೆಯವರಿಂದ ಪಕವಾಜ್ ಜುಗಲ್ಬಂದಿ ನಡೆಯಲಿದೆ. ಚಾಲುಕ್ಯ ಅಂಚೆಚೀಟಿ ಹಾಗೂ ಹಳೆಯ ನಾಣ್ಯಗಳ ಪ್ರದರ್ಶನವೂ ನಡೆಯಲಿದೆ ಎಂದು ಮನೋಜ ತಿಳಿಸಿದರು. ಪಲ್ಲವಿ ಖಾನ್ಪೇಟ್, ಸತ್ಯಪ್ರಮೋದ ದೇಶಪಾಂಡೆ ಗೋಷ್ಠಿಯಲ್ಲಿದ್ದರು.