ಗಿನ್ನಿಸ್ ದಾಖಲೆಗೆ ಮುಂದಾದ ಪವಾರ
ಹುಬ್ಬಳ್ಳಿ: ಬಲ್ಬ್ ಕಲೆಯ ಮೂಲಕ 8 ಬಾರಿ ಲಿಮ್ಕಾ ದಾಖಲೆ ಬರೆದಿರುವ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ವಿಜಯಕುಮಾರ ಪವಾರ ಈಗ ಗಿನ್ನಿಸ್ ದಾಖಲೆಗೆ ಮುಂದಾಗಿದ್ದಾರೆ. ಗಿನ್ನಿಸ್ ದಾಖಲೆಗೆ ಸಲ್ಲಿಸಿದ್ದ ಅರ್ಜಿ ಸ್ವೀಕೃತವಾಗಿದ್ದು, ಅದಕ್ಕಾಗಿ ಪಾವತಿಸಬೇಕಿರುವ ರು. 32 ಸಾವಿರ ಪ್ರವೇಶ ಶುಲ್ಕಕ್ಕೆ ದಾನಿಗಳಿಂದ ಸಹಾಯ ಯಾಚಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದ ಕಲಾವಿದ, ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿ ವಿಜಯಕುಮಾರ ಪವಾರ, ಗಿನ್ನಿಸ್ ದಾಖಲೆಗಾಗಿ ಬಲ್ಬ್ ಒಳಗಡೆ ಕಲಾಕೃತಿ ಮಾಡುವ ಸಿದ್ಧತೆಯಲ್ಲಿರುವುದಾಗಿ ತಿಳಿಸಿದರು.
ಅವರು ಇದುವರೆಗೆ 600 ಬಲ್ಬ್ ಒಳಗೆ, ಸಾವಿರಕ್ಕೂ ಹೆಚ್ಚು ಬಲ್ಬ್‌ಗಳ ಮೇಲೆ ಕಲಾಕೃತಿ ರಚಿಸಿದ್ದಾರೆ. ತಾಜಮಹಲ್, ಗೋಲಗುಂಬಜ್, ವಿಧಾನಸಭೆ, ಲಂಡನ್ ಬ್ರಿಡ್ಜ್, ಕೆಂಪು ಕೋಟೆ, ಎತ್ತಿನ ಬಂಡಿ, ಕೆಸರಿನ ಲಿಂಗಗಳು, ವಿಮಾನ, ಗಣೇಶ ವಿಗ್ರಹಗಳು, ಇಲೆಕ್ಟ್ರಾನಿಕ್ ವಸ್ತುಗಳಾದ ಫ್ಯಾನ್, ಕ್ಯಾಲ್ಕುಲೇಟರ್, ಕಂಪ್ಯೂಟರ್, ಟೀವಿ, ಸ್ವಾತಂತ್ರ್ಯ ಹೋರಾಟಗಾರರು, ಕವಿಗಳು, ಸಾಹಿತಿಗಳ ಭಾವಚಿತ್ರಗಳನ್ನು ವಿವಿಧ ರೀತಿ ಬಲ್ಬ್‌ಗಳಲ್ಲಿ ರಚಿಸಿದ್ದಾರೆ.
2010, 11 ಹಾಗೂ 12ರಲ್ಲಿ ತಲಾ ಎರಡು ಬಾರಿ ಲಿಮ್ಕಾ ದಾಖಲೆ ಮಾಡಿರುವ ವಿಜಯ ಕುಮಾರ್, 2016ರಲ್ಲೂ ಎರಡು ದಾಖಲೆಗಳು ಲಿಮ್ಕಾ ಪುಸ್ತಕ ಸೇರಲಿವೆ. ಗಿನ್ನಿಸ್ ದಾಖಲೆಗೆ ಅಮೆರಿಕದ 700 ಡಾಲರ್ ಮತ್ತು ಶೇ. 20 ವ್ಯಾಟ್ ಸೇರಿ ಒಟ್ಟು ರು. 32 ಸಾವಿರ ಪ್ರವೇಶ ಶುಲ್ಕ ನೀಡಬೇಕಿದೆ. ಇಷ್ಟು ಹಣ ತಮ್ಮಲ್ಲಿ ಇಲ್ಲ.
ಇದಕ್ಕಾಗಿ ಪ್ರಾಯೋಜಕರನ್ನು ಅರಸುತ್ತಿದ್ದೇನೆ. ಪ್ರಾಯೋಜಕರು ಸಿಗದೆ ಮೂರು ವರ್ಷಗಳಿಂದ ಗಿನ್ನಿಸ್ ಕನಸು ಹಾಗೇ ಉಳಿದಿದೆ. ನೆರವು ನೀಡುವವರು ಮೊ. 89702 72103 ಅಥವಾ 78993 41386 ಸಂಪರ್ಕಿಸುವಂತೆ ಕೋರಿದ್ದಾರೆ.