ಪ್ರಕೃತಿ ವಿಸ್ಮಯದ ತಾರ್ಕಿಕ ಚಿಂತನೆಯೇ ವಿಜ್ಞಾನ
ಧಾರವಾಡ: ಪ್ರಕೃತಿ ವಿಸ್ಮಯವನ್ನು ತಾರ್ಕಿಕವಾಗಿ ಅವಲೋಕಿಸುವುದೇ ವಿಜ್ಞಾನ ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಯು.ಎಸ್. ರಾಯ್ಕರ ಅಭಿಪ್ರಾಯಪಟ್ಟರು.
ಇಲ್ಲಿಯ ಆರ್‌ಎಲ್‌ಎಸ್ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿಸರ್ಗ ತಿಳಿದುಕೊಳ್ಳುವ ಹಂಬಲತೆ ಹಾಗೂ ನಿಸರ್ಗದ ಬಗೆಗೆ ತಾರ್ಕಿಕ ಚಿಂತನೆಯು ವಿಜ್ಞಾನದ ಆವಿಷ್ಕಾರಕ್ಕೆ ಕಾರಣವಾಗಿದೆ. ಅದಕ್ಕಾಗಿ ಭಾರತೀಯ ಡಾ. ಸಿ.ವಿ. ರಾಮನ್ ಅವರ ಬೆಳಕಿನ ಪರಿಣಾಮ ಜಗತ್ತಿಗೆ ಹೊಸ ವಿಚಾರವನ್ನು ತಿಳಿಸಿಕೊಟ್ಟಿದೆ. ನಾವು ವಿದ್ಯಾರ್ಥಿಗಳನ್ನು ಬಲವಂತವಾಗಿ ಡಾಕ್ಟರ್, ಎಂಜಿನಿಯರ್‌ಗಳನ್ನಾಗಿ ಮಾಡಲು ಹೊರಟಿದ್ದೇವೆ. ಅದರ ಬದಲಾಗಿ ವಿದ್ಯಾರ್ಥಿಗಳ ಆಸಕ್ತಿಯ ವಿಷಯಕ್ಕೆ ಪ್ರೋತ್ಸಾಹ ನೀಡಿದರೆ ಅಲ್ಲಿಯೂ ಸಹ ಹೊಸ ಸಂಶೋಧನೆ ಕಾಣಬಹುದು ಎಂದರು.
ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಡಿ. ಹೆಗಡಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಸುಪ್ತ ಚೇತನವಿದೆ. ಆಸಕ್ತಿ ಜಾಗೃತಗೊಳಿಸಿದರೆ ಪ್ರತಿಯೊಬ್ಬರು ಮಹಾನ್ ವ್ಯಕ್ತಿಯಾಗಬಹುದು. ವಿಜ್ಞಾನ ಕೇವಲ ಪ್ರಯೋಗ ಶಾಲೆಯನ್ನು ಹೊಂದಿಲ್ಲ ಸ್ವಂತಿಕೆ, ಯೋಚನಾ ಶಕ್ತಿ ಹೊಂದಿದೆ. ಒಂದು ವಸ್ತುವನ್ನು ನೋಡಿದಾಗ ಅದರ ಬಗ್ಗೆ ತಾರ್ಕಿಕ ವಿಚಾರ ಲಹರಿ ಒಟ್ಟು ಮೊತ್ತವೇ ವಿಜ್ಞಾನವಾಗಿದೆ ಎಂದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಡಾ. ಬಸವರಾಜ ಅನಾಮಿ, ವಿ.ಎಸ್. ಪಾಟೀಲ, ಸುಪ್ರಿಯಾ ಜಂಬಗಿ, ಬಿ.ಎಂ. ಸುರೇಬಾನ, ಎ.ವೈ. ಶಿಲಾರ, ಎಂ.ಎನ್. ಹಳವೂರ, ಜೆ.ಸಿ. ಕಂಬಾರ ಇದ್ದರು.