ಪ್ರತಿಭೆಗೆ ಸೂಕ್ತ ವೇದಿಕೆ ಅಗತ್ಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 12
ಆಧುನಿಕ ಯುಗದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಅದ್ವಿತೀಯ ಸಾಧನೆ ಮೆರೆಯುತ್ತಿದ್ದೇವೆ. ಆದಾಗಿಯ್ಯೂ ಸೂಕ್ತ ವೇದಿಕೆ ಸಿಗದಾಗಿ ನಮ್ಮಲ್ಲಿರುವ ಪ್ರತಿಭೆ ಕಮರಿ ಹೋಗುತ್ತಿದೆ ಎಂದು ಐಬಿಎಂಆರ್ ಸಂಸ್ಥೆಯ ಚೇರ್ಮನ್ ವಿನಯಚಂದ್ರ ಮಹೇಂದ್ರಕರ ಕಳವಳ ವ್ಯಕ್ತ ಪಡಿಸಿದರು.
ಇಲ್ಲಿನ ಶೆರೆವಾಡದ ಗಾಯತ್ರಿ ನಗರದಲ್ಲಿನ ಆಕ್ಸ್ಫರ್ಡ್ ಪಾಲಿಟೆಕ್ನಿಕ್ನಲ್ಲಿ ಐಐಟಿ ಬಾಂಬೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ರೋಬೋಟೆಕ್ಸ್ ಚಾಂಪಿಯನ್ಶಿಪ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ವಿದ್ಯಾರ್ಥಿಗಳು ಮತ್ತೂ ಹೆಚ್ಚಿನದ್ದನ್ನು ಸಾಧಿಸಬಹುದು. ಆದರೆ ಇದಕ್ಕೆ ಸೂಕ್ತ ವೇದಿಕೆಯ ಸಿಗದಾಗಿದೆ ಎಂದರು.
ವಿದ್ಯಾರ್ಥಿಗಳು ಸದಾ ಪ್ರಯತ್ನಿಶೀಲರಾಗಿರಬೇಕು. ಹೊಸದನ್ನು ಹುಡುಕುವ ಹಾಗೂ ಕಲಿಯುವ ಗುಣ ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳು ಸಾಧನೆಗೈಯಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಹುಟ್ಟಿಹಾಕುವ ನಿಟ್ಟಿನಲ್ಲಿ ಹಾಗೂ ಪ್ರತಿಭೆ ಅನಾವರಣಗೊಳಿಸಲು ಚಾಂಪಿಯನ್ಶಿಪ್ ಸ್ಪರ್ಧೆ ಆಯೋಜಿಸಿದೆ.
ಮುಂಬೈನ ತರಬೇತುದಾರ ಹರ್ಷಿಲ್ ಜೋಶಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಸಾಕಷ್ಟು ಅವಕಾಶಗಳು ಬರುತ್ತವೆ. ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇದು ಭವಿಷ್ಯದಲ್ಲಿ ಮಹತ್ತರ ಸಾಧನೆಗೆ ಸಹಕಾರಿಯಾಗುತ್ತದೆ ಎಂದರು.
ಪ್ರಾಂಶುಪಾಲರಾದ ವಿಜಯಲಕ್ಷ್ಮಿ ಸುತಗಟ್ಟಿಮಠ ಮಾತನಾಡಿ, ಆಕ್ಸ್ಫರ್ಡ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾಕಷ್ಟು ಕಾರ್ಯಕ್ರಮ ಆಯೋಜಿಸಿದ್ದು, ಈ ಸ್ಪರ್ಧೆ ವಿದ್ಯಾರ್ಥಿಗಳ ಏಳ್ಗೆಗೆ ಸಹಕಾರಿಯಾಗಲಿದೆ ಎಂದರು.
ಸ್ಪರ್ಧೆಯಲ್ಲಿ ಅಂಜುಮನ್, ವರೂರ ಪಾಲಿಟ್ನೆಕ್ ಕಾಲೇಜಿನ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು. ಶಿಶಿರ ಪಾಟೀಲ ಪ್ರಾರ್ಥಿಸಿದರು. ಸಂಧ್ಯಾ ಶಿಬಾರಗಟ್ಟಿ ನಿರೂಪಿಸಿದರು. ಪ್ರವೀಣ ಪುರ್ತಗೇರಿ ವಂದಿಸಿದರು.
--
ಗ್ರಾಮದೇವಿ ಜಾತ್ರೋತ್ಸವ
ಕಲಘಟಗಿ: ಪಟ್ಟಣದಾದ್ಯಂತ ತಳಿರು-ತೋರಣಗಳ ಸಾಲು... ಭಕ್ತಜನಸಾಗರ... ಜನಪದ-ಮಂಗಲ ವಾದ್ಯಗಳ ನೀನಾದಗಳ ಮಧ್ಯೆ ಸಡಗರ-ಸಂಭ್ರಮದಿಂದ ಪಟ್ಟಣದ ಶ್ರೀ ಗ್ರಾಮದೇವಿ ಜಾತ್ರೆಯು ಬುಧವಾರದಿಂದ ಆರಂಭಗೊಂಡಿತು.
ಗ್ರಾಮದೇವಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಿಯರ ಪ್ರತಿಷ್ಠಾಪನೆ ನೆರವೇರಿತು. ಮಂಗಲ ವಾದ್ಯ, ಡೊಳ್ಳು, ಕರಡಿ ಮಜಲು, ಜಗ್ಗಲಗಿ, ಕೋಲಾಟ ಮುಂತಾದ ಮೇಳಗಳೊಂದಿಗೆ ಮಾಂಗಲ್ಯ ಧಾರಣೆಯಾದ ದೇವಿಯರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಸುಮಾರು 4 ಗಂಟೆಗಳ ಕಾಲ ನಡೆದ ಮೆರವಣಿಗೆ ಜೋಳದ ಓಣಿ ಮಾರ್ಗವಾಗಿ ಅಕ್ಕಿ ಓಣಿಯ ಜಾತ್ರಾ ಮಂಟಪ ತಲುಪಿತು. ನಂತರ ಪ್ರತಿಷ್ಠಾಪನಾ ಕಾರ್ಯಕ್ರಮ ಸಕಲ ವಿಧಿವಿಧಾನಗಳೊಂದಿಗೆ ನೆರವೇರಿತು.
ಜಾತ್ರಾ ಸಮಿತಿ ಅಧ್ಯಕ್ಷ ಸುಧೀರ ಬೋಳಾರ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಿ.ಎಂ. ನಿಂಬಣ್ಣವರ, ಎಸ್.ಬಿ. ಹುಬ್ಬಳ್ಳಿಮಠ, ಎಂ.ಐ. ಕಟ್ಟಿ, ಕಾರ್ಯದರ್ಶಿ ಬಾಳು ಖಾನಾಪುರ, ರಾಕೇಸ ಅಳಗವಾಡಿ, ಶ್ರೀಕಾಂತ ಕಟಾವಕರ, ನಿತೀಶ ಶೆವಡೆ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.