ಲಿಂಗಾಯತ ಮಹಾಸಭೆ ಘಟಕ ಉದ್ಘಾಟನೆ
ಹುಬ್ಬಳ್ಳಿ: ವಿಶ್ವ ಲಿಂಗಾಯತ ಮಹಾ ಸಭೆ ಧಾರವಾಡ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭ ಮತ್ತು ಲಿಂಗಾಯತ ಸ್ವತಂತ್ರ ಧರ್ಮ ಚಿಂತನ ಶಿಬಿರ ಮಾ. 15ರಂದು ಹುಬ್ಬಳ್ಳಿಯ ಜೆಸಿ ನಗರ ಅಕ್ಕನ ಬಳಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಘಟಕದ ಜಿಲ್ಲಾಧ್ಯಕ್ಷ ಈರಪ್ಪ ಎಮ್ಮಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರೊ. ಸಂಜಯ ಮಾಕಲ್, ಚಂದ್ರಕಾಂತ ನಿಡಗುಡಿ, ಪ್ರಭುಲಿಂಗ ಮಾಗಾಂವಕರ ಪಾಲ್ಗೊಳ್ಳಲಿದ್ದಾರೆಂದರು.
ಲಿಂಗಾಯತ ಧರ್ಮ ಅವೈದಿಕ ಧರ್ಮ. ವೈದಿಕರಿಂದ ಕೆಳವರ್ಗದವರ ಮೇಲೆ ನಡೆಯುತ್ತಿದ್ದ ಶೋಷಣೆಯ ವಿರುದ್ಧವಾಗಿ 12ನೇ ಶತಮಾನದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸಮಾನತೆಯನ್ನು ತರುವುದಕ್ಕಾಗಿ ಬಸವಣ್ಣನವರು ವಿವಿಧ ಜಾತಿ, ಜನಾಂಗ, ಬುಡಕಟ್ಟಿಗೆ ಸೇರಿದ 770 ಜನ ಶ್ರಮಜೀವಿಗಳನ್ನು ಸಂಘಟಿಸಿ ಅನುಭವ ಮಂಟಪವನ್ನು ಕಟ್ಟಿ ಜಾತಿ, ವರ್ಣ, ವರ್ಗ ಭೇದವಿಲ್ಲದ ಲಿಂಗ ತಾರತಮ್ಯ ರಕ್ಷಿತವಾದ ಸ್ವತಂತ್ರವಾದ ಧರ್ಮವನ್ನು ಸ್ಥಾಪಿಸಿದರು. ಈಗ ಕೆಲವರು ಅದಕ್ಕೆ ವೀರಶೈವವನ್ನು ಸೇರಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ವೀರಶೈವವೇ ಬೇರೆ ಲಿಂಗಾಯತವೇ ಬೇರೆ, ಇದನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಎಸ್.ವಿ. ಪಾಟೀಲ, ತಾರಾದೇವಿ ವಾಲಿ, ಈರಣ್ಣ ಉಪ್ಪಿನ, ಸುಮಾ ಹಿರೇಮಠ ಮತ್ತಿತರರಿದ್ದರು.