ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ
ಹುಬ್ಬಳ್ಳಿ: ಕಠಿಣ ಪರಿಶ್ರಮ ಹಾಗೂ ಸಾಧನೆ ಮಾಡಬೇಕೆಂಬ ಛಲವಿದ್ದಲ್ಲಿ ಅಂಗವೈಕಲ್ಯವೂ ಅಡ್ಡಿಯಾಗದು. ಈ ಮಾತು ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ಸಿಐಸಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಮಾಬುಸಾಬ ಸೈದುನವರ ಅವರಿಗೆ ಸರಿ ಹೊಂದುತ್ತದೆ. ಕೈ-ಕಾಲುಗಳ ಬೆಳವಣಿಗೆ ಸರಿಯಾಗಿ ಇಲ್ಲದಿದ್ದರೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹೊಂದಿರುವ ಮಾಬುಸಾಬ, ಬುಧವಾರದಿಂದ ಆರಂಭಗೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಆತ್ಮವಿಶ್ವಾಸದಿಂದ ಹಾಜರಾಗಿದ್ದಾನೆ. ನೂಲ್ವಿಯ ಎಸ್‌ಜೆಆರ್‌ಯು ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಮಾಬುಸಾಬನ ಹಾಜರಾತಿ ವಿಕಲಚೇನರಿಗೆ ಅನುಕಂಪ ಬೇಕಿಲ್ಲ. ಪ್ರೋತ್ಸಾಹ ಬೇಕು ಎಂಬ ವಾಸ್ತವ ಸಾರಿ ಹೇಳುವಂತಿತ್ತು.
ಅದ್ಭುತ ಪ್ರತಿಭೆ: ಮಾಬುಸಾಬ, ವಿಕಲಾಂಗನಾದರೂ ಭಾಷಣ, ಸಂಗೀತ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರತಿಭೆ ಮೆರೆದಿದ್ದಾನೆ. ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾನೆ. ಸಾಮಾನ್ಯ ವಿದ್ಯಾರ್ಥಿಗಳೂ ನಾಚುವಂತೆ ತನ್ನ ಪ್ರತಿಭೆ ಅನಾವರಣಗೊಳಿಸಿ, ಶಿಕ್ಷಕರ ಹಾಗೂ ಸಹವರ್ತಿಗಳ ಪ್ರಶಂಸೆ ಗಳಿಸಿದ್ದಾನೆ. ಸ್ಪಷ್ಟವಾಗಿ ಮಾತನಾಡಬಲ್ಲ ಮಾಬುಸಾಬ, ಇಂಪಾಗಿ ಹಾಡುಬಲ್ಲ. ಆತನಲ್ಲಿರುವ ಆತ್ಮವಿಶ್ವಾಸ, ನಂಬಿಕೆ, ಶ್ರದ್ಧೆ ಇತರರಿಗೂ ಮಾದರಿಯಾಗಲಿ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯ ಆರ್.ಎಫ್. ಭರಮಗೌಡ್ರ.
13 ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಣೆ
ಗದಗ: ಕಾಲೇಜಿನ ಪರವಾಗಿ ಕ್ರೀಡಾ ಸ್ಪರ್ಧೆಗಳಿಗೆ ತೆರಳಿದ್ದ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ಹಾಜರಾತಿ ನೀಡದ ಹಿನ್ನೆಲೆಯಲ್ಲಿ ಮೂವರು ಬಾಲಕಿಯರು ಸೇರಿ 13 ವಿದ್ಯಾರ್ಥಿಗಳು ಬುಧವಾರ ನಡೆದ ಪರೀಕ್ಷೆಯಿಂದ ವಂಚಿತರಾದ ಘಟನೆ ಮುಳಗುಂದ ಪಟ್ಟಣದಲ್ಲಿ ಜರುಗಿದೆ. ನಿಯಮ ಪ್ರಕಾರ ಕಾಲೇಜಿನ ಪರ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಹಾಜರಾತಿ ನೀಡಬೇಕು. ಆದರೆ, ಗದಗ ತಾಲೂಕಿನ ಮುಳಗುಂದ ಪಟ್ಟಣದ ಜ. ಜಯದೇವ ಕಾಲೇಜಿನ ಪ್ರಾಚಾರ್ಯ ಎಸ್.ಎಫ್. ಮುದ್ದನಗೌಡ ಹಾಜರಾತಿ ನೀಡಲು ಮರೆತು, ಪರೀಕ್ಷಾ ಮಂಡಳಿಗೆ ಮಾಹಿತಿ ಕಳುಹಿಸಿದ್ದಾರೆ. ಹಾಜರಾತಿ ಕಡಿಮೆ ಇರುವ ಕಾರಣ ಪಿಯು ಪರೀಕ್ಷಾ ಮಂಡಳಿ 13 ವಿದ್ಯಾರ್ಥಿಗಳನ್ನು ಅನರ್ಹಗೊಳಿಸಿದೆ. ಕ್ರೀಡಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನಗರದ ಮೈಲಾರಪ್ಪ ಮೆಣಸಗಿ ಕಾಲೇಜಿಗೆ ಬಂದಿದ್ದು, ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದಾರೆ. ಈ ಕುರಿತಾಗಿ ಪ್ರಾಚಾರ್ಯ ಮುದ್ದನಗೌಡ ಅವರು ತಮ್ಮ ಅಚಾತುರ್ಯ ಒಪ್ಪಿಕೊಂಡು, ಜೂನ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಿಸುವ ಭರವಸೆ ನೀಡಿದ್ದಾರೆ.
ಒಂಟಿ ಮನೆಗೆ ನುಗ್ಗಿ ದರೋಡೆ
ಮುಂಡಗೋಡ: ನಾಲ್ವರು ದರೋಡೆಕೋರರ ತಂಡ ಒಂಟಿ ಮನೆಗೆ ನುಗ್ಗಿ, ಚಾಕು ತೋರಿಸಿ, ಬೆದರಿಸಿ, ಮನೆಯಲ್ಲಿದ್ದ ರು. 75 ಸಾವಿರ ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ತಾಲೂಕಿನ ಟಿಬೆಟಿಯನ್ ಕಾಲನಿ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ. ಪಟ್ಟಣದಿಂದ 3 ಕಿ.ಮೀ. ದೂರದ ಅಂಚಿನ ಗದ್ದೆಯ ರಾಜನ್ ಮೆನನ್ ಎಂಬುವರಿಗೆ ಸೇರಿದ ಒಂಟಿ ಮನೆಯಲ್ಲಿ ಈ ಕೃತ್ಯ ನಡೆದಿದೆ. ರಾತ್ರಿ ರಾಜನ್ ಮತ್ತು ಅವರ ಪತ್ನಿ ಲಕ್ಷ್ಮಿ ಇರುವಾಗ ನಾಲ್ವರು ದರೋಡೆಕೋರರು ಏಕಾಏಕಿ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ಮನೆ ಮಾಲೀಕ ರಾಜನ್ ಕೈಗೆ ಚಾಕುವಿನಿಂದ ಇರಿಯಲಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ರು. 2 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎನ್ನಲಾಗಿದೆ. ಎಸ್ಪಿ ದಿಲೀಪ್, ಮಗೆಣ್ಣವರ, ಸದಾನಂದ ವೆರ್ಣೇಕರ, ಸಿಪಿಐ ಪಠಾಣ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.