ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಿಂದೂ ರಕ್ಷಕರ ಕೈಗೆ ಆಡಳಿತ ನೀಡಿ: ಪ್ರಮೋದ ಮುತಾಲಿಕ

Lingaraj Badiger
Updated On : 13 Mar 2014, 11:14 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 12
ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಬುಧವಾರ ಬೈಕ್ ರ್ಯಾಲಿ ನಡೆಯಿತು.
ಸಿದ್ಧಾರೂಢಮಠದಿಂದ ಹೊರಟ ಬೈಕ್ ರ್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ತನ್ಮೂಲಕ ಹಿಂದೂ ಧರ್ಮ ರಕ್ಷಣೆಗೆ ಹಾಗೂ ಹಿಂದೂ ಧರ್ಮ ಪ್ರತಿಪಾದಕರಿಗೆ ಆಡಳಿತ ನೀಡುವಂತೆ ಮನವಿ ಮಾಡಲಾಯಿತು. ರ್ಯಾಲಿಗೆ ಚಾಲನೆ ನೀಡಿದ ಪ್ರಮೋದ ಮುತಾಲಿಕ, ಹಿಂದೂ ಧರ್ಮೀಯರ ಮೇಲೆ ನಿರಂತರವಾಗಿ ಅನ್ಯಾಯ, ಅತ್ಯಾಚಾರ ನಡೆಯುತ್ತಿದೆ. ಆಳುವವರು ಹಿಂದೂ ಧರ್ಮೀಯರನ್ನು ಕಡೆಗಣಿಸಿದ್ದಾರೆ. ಕಾಂಗ್ರೆಸ್‌ನಂತಹ ಸರ್ಕಾರಗಳು ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿವೆ. ಇಂಥ ಪಕ್ಷವನ್ನು ಅಧಿಕಾರದಿಂದ ಕಿತ್ತೆಸೆಯಬೇಕು ಎಂದರು.
ರಾಜ್ಯದ ವಿಷಯಕ್ಕೆ ಬಂದಾಗ ಪರಿಸ್ಥಿತಿ ವಿಭಿನ್ನವಾಗಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿಕೊಂಡು ಹಿಂದೂ ಧರ್ಮೀಯರನ್ನು ತುಳಿಯುತ್ತಿವೆ. ಬಿಜೆಪಿ ಮುಖಂಡರಿಗೆ ಅಧಿಕಾರ ಪಿತ್ತ ನೆತ್ತಿಗೇರಿದೆ. ಹಿಂದೂ ಧರ್ಮದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ರಾಜ್ಯವನ್ನು ಲೂಟಿ ಹೊಡೆದಿದೆ. ಇದರ ಪರಿಣಾಮವೋ ಎನ್ನುವಂತೆ ರಾಜ್ಯದ ಜನತೆ ಕಳೆದ ಚುನಾವಣೆಯಲ್ಲಿ ಬಿಜೆಪಿ ತಕ್ಕಪಾಠ ಕಲಿಸಿದ್ದಾರೆ. ಇಷ್ಟಾದರೂ ಬಿಜೆಪಿಗೆ ಬುದ್ದಿ ಬಂದಿಲ್ಲ ಎಂದು ಹರಿಹಾಯ್ದರು. ದೇಶದಾದ್ಯಂತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಅಷ್ಟಿಷ್ಟಲ್ಲ. ಬಾಂಗ್ಲಾ ನುಸುಳುಕೋರರು ಭಾರತಕ್ಕೆ ನುಸುಳುತ್ತಿದ್ದಾರೆ. ಬಾಂಗ್ಲಾದಲ್ಲಿರುವ ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಭಾರತಕ್ಕೆ ನುಸುಳಿರುವ ಬಾಂಗ್ಲಾ ದೇಶಿಯರನ್ನು ಕಾಂಗ್ರೆಸ್ ಪೋಷಿಸುತ್ತಿದೆ. ಇನ್ನಾದರೂ ಹಿಂದೂಗಳು ಎಚ್ಚೆತ್ತು ದೇಶವನ್ನು ರಕ್ಷಿಸಲು ಹಿಂದುತ್ವವಾದಿಗಳನ್ನು ಅದರಲ್ಲಿಯೂ ನಿಜವಾದ ಹಿಂದೂ ರಕ್ಷಕರ ಕೈಗೆ ಆಡಳಿತ ನೀಡದಿದ್ದರೆ ಉಳಿಗಾಲವಿಲ್ಲ ಎಂದರು. ತಾವು ಸೇರಿದಂತೆ ಈಗಾಗಲೇ ಶ್ರೀರಾಮ ಸೇನೆಯಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಯಾಗಿದೆ. ದೇಶ, ರಾಜ್ಯದ ಅದರಲ್ಲಿಯೂ ಮುಖ್ಯವಾಗಿ ಹಿಂದೂಗಳನ್ನು ರಕ್ಷಿಸಲು ತಮ್ಮ ಕೈ ಬಲ ಪಡಿಸಬೇಕೆಂದು ಮುತಾಲಿಕ ಮನವಿ ಮಾಡಿದರು. ಕುಮಾರ ಹಕಾರೆ, ಬಸವರಾಜ ಬೂದಿಹಾಳ, ವಿನೋದ ಪಡತರೆ, ಗೌರಿಶಂಕರ ಮೋಟ, ಸತೀಶ ಪಾಟಣಕರ, ಗಣೇಶ ಕದಂ, ಲಕ್ಷ್ಮಣ ಮೊರಬ, ಗೀತಾ ಮೋಹನರಾಜ್, ಗಾಯತ್ರಿ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement