ಹೋಳಿ ಹಬ್ಬದಲ್ಲಿ ಶಾಂತತೆ ಕಾಪಾಡಲು ಪಣ
ಕನ್ನಡ ಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 12
ಅವಳಿನಗರದಲ್ಲಿ ಮಾ. 16ರಿಂದ 20ರ ವರೆಗೆ ನಡೆಯುವ ಹೋಳಿ ಹಬ್ಬದಲ್ಲಿ ಎಲ್ಲ ಜಾತಿ, ಮತ, ಪಂಥಗಳ ಜನರೆಲ್ಲರೂ ಭಾವೈಕ್ಯದಿಂದ ಪಾಲ್ಗೊಂಡು ಮಹಾನಗರದ ಶಾಂತಿ ಮುಕುಟಕ್ಕೆ ಮತ್ತೊಂದು ಗರಿ ಹಚ್ಚೋಣ...
ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಇಲಾಖೆ ಹೋಳಿ ಹಬ್ಬದ ಪ್ರಯುಕ್ತ ಬುಧವಾರ ಬೆಳಗ್ಗೆ ಕಾರವಾರ ರಸ್ತೆಯ ಸಿಎಆರ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಜಾತಿಯ ಧರ್ಮ ಗುರುಗಳು ಹಾಗೂ ಗಣ್ಯರು, ಶಾಂತಿ ಮಂತ್ರ ಪಠಿಸಿದರು.
ಅರಿಷಡ್ವರ್ಗಗಳನ್ನು ದಹಿಸುವ ಪ್ರತೀಕವಾಗಿರುವ ಹೋಳಿ ಹಬ್ಬದಲ್ಲಿ ಎಲ್ಲ ಜಾತಿ, ಮತಗಳ ಜನರು ಪಾಲ್ಗೊಂಡು ಶಾಂತ ರೀತಿಯಿಂದ ಆಚರಿಸುವ ಮೂಲಕ ಸಹೋದರತ್ವ ಮೆರೆಯೋಣ ಎಂದೂ ಸಂಕಲ್ಪಗೈಯಲಾಯಿತು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಹಣ, ಅಂತಸ್ತು, ಅಧಿಕಾರಕ್ಕಿಂತಲೂ ದೊಡ್ಡದು ಶಾಂತಿ. ಇಂದು ಜಗತ್ತಿಗೆ ಶಾಂತಿ ಬೇಕಾಗಿದೆ. ಪ್ರತಿಯೊಬ್ಬ ಮನುಷ್ಯನಿಗೆ ಶಾಂತಿ ಬೇಕಾಗಿದೆ. ಆದ್ದರಿಂದ ಮನುಷ್ಯರಾದ ನಾವೆಲ್ಲರೂ ಶಾಂತಿಯನ್ನು ಕಾಪಾಡಿಕೊಂಡು ಬರಲು ಸಂಕಲ್ಪಗೈಯಬೇಕಿದೆ. ಹೋಳಿ ಹಬ್ಬದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಿಕೊಂಡು ಬರುವ ಮೂಲಕ ಅವಳಿನಗರದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದೂ ಶ್ರೀಗಳು ನುಡಿದರು.
ಮುಸ್ಲಿಂ ಧರ್ಮಗುರು ಸೈಯದ್ ತಾಜುದ್ದೀನ್ ಖಾದ್ರಿ, ಹಬ್ಬಗಳು ಬರುವುದೇ ಖುಷಿ ನೀಡಲು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಹೋಳಿ ಹಬ್ಬಕ್ಕೆ ಮುಸ್ಲಿಂ ಬಾಂಧವರು ಎಲ್ಲ ರೀತಿಯಿಂದ ಸಹಕಾರ ನೀಡುವ ಮೂಲಕ ಮಹಾನಗರದಲ್ಲಿ ಶಾಂತಿ ಕಾಪಾಡಿಕೊಂಡು ಬರಲು ಮುಂದಾಗಬೇಕೆಂದರು.
ಕ್ರಿಶ್ಚಿಯನ್ ಧರ್ಮಗುರು ಫಾದರ್ ಜೋಸೆಫ್ ರೋಡ್ರಿಕ್ಸ್, ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ರೆಲ್ಲರೂ ಆಯಾ ಹಬ್ಬಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪ್ರೀತಿ-ವಿಶ್ವಾಸ ಗಟ್ಟಿಗೊಳಿಸಿಕೊಳ್ಳಬೇಕಿದೆಯಲ್ಲದೆ ಸಹೋದರತ್ವಕ್ಕೆ ಹೊಸ ಭಾಷ್ಯೆ ಬರೆಯಲು ಮುಂದಾಗೋಣ ಎಂದರು.
ಸಿಖ್ ಧರ್ಮಗುರು ಗುರುಚರಣ ಸಿಂಗ್, ಹೋಳಿ ಹಬ್ಬದಲ್ಲಿ ಎಲ್ಲ ಜಾತಿ, ಮತಗಳ ಜನರು ಒಟ್ಟಾಗಿ ಪಾಲ್ಗೊಳ್ಳುವ ಮೂಲಕ ಹಬ್ಬದ ಸವಿ ಸವಿಯೋಣ ಎಂದರು.
ಮಾಜಿ ಸಚಿವ ಜಬ್ಬಾರಖಾನ ಹೊನ್ನಳ್ಳಿ, ಹು-ಧಾ ಮಹಾನಗರದಲ್ಲಿ ಕಳೆದ 10-12 ವರ್ಷಗಳಿಂದ ಸಂಪೂರ್ಣ ಶಾಂತಿ ನೆಲೆಸಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಹಳೆಹುಬ್ಬಳ್ಳಿ ಪ್ರದೇಶದಲ್ಲಿ ಕೆಲ ಕಿಡಿಗೇಡಿಗಳು ಅನಾವಶ್ಯಕವಾಗಿ ಶಾಂತಿ ಕದಡಲು ಯತ್ನಿಸುತ್ತಾರೆ ಅಂಥವರ ವಿರುದ್ಧ ಇಲಾಖೆ ಹದ್ದಿನ ಕಣ್ಣಿರಿಸಬೇಕು ಎಂದು ಹೇಳಿದರು.
ಹಿಂದೂ ಮುಖಂಡ ವೆಂಕಟೇಶ ಸವದತ್ತಿ, ಹೋಳಿ ಹಬ್ಬವನ್ನು ಬ್ಯಾರಿಕೇಡ್ ರಹಿತವಾಗಿ ಆಚರಿಸುವಂತಾಗಬೇಕು. ಹಬ್ಬದಲ್ಲಿ ಯರ್ರಾಬಿರ್ರಿಯಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಕಾಮದಹನದ ಸಂದರ್ಭದಲ್ಲಿ ಉಸುಕನ್ನು ಬಳಸಿ ರಸ್ತೆ ಹಾಳಾಗುವುದನ್ನು ತಡೆಯಬೇಕು ಎಂದರು.
ಪ್ರೊ. ಐ.ಜಿ. ಸನದಿ, ಮಹ್ಮದ ಯುಸೂಫ್ ಸವಣೂರ, ಪ್ರಗತಿ ಹಾಗೂ ಅಭಿವೃದ್ಧಿಗೆ ಶಾಂತಿ ಅತ್ಯಂತ ಅವಶ್ಯ. ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳದೆ ಇರುವ ಮುಸ್ಲಿಂ ಬಾಂಧವರು ಅಂದು ಮನೆಯಲ್ಲೇ ಕಾಲ ಕಳೆಯುವ ಮೂಲಕ ಹಬ್ಬ ಶಾಂತ ರೀತಿಯಿಂದ ಆಚರಣೆಗೆ ಸಹಕರಿಸಬೇಕೆಂದರು.
ಮಧ್ಯಾಹ್ನ ಪ್ರಾರ್ಥನೆಗೆ ತೆರಳುವ ಮುಸ್ಲಿಂ ಬಾಂಧವರ ಮೇಲೆ ಒತ್ತಾಯ ಪೂರ್ವಕವಾಗಿ ಬಣ್ಣ ಹಾಕುವುದು ಬೇಡ ಎಂದ ಅವರು, ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ರಾತ್ರಿ 10ರ ನಂತರ ಹಲಿಗೆ ಬಾರಿಸದೆ ಸಹಕರಿಸಬೇಕೆಂದರು.
ಮದನ ದೇಸಾಯಿ, ಪಿತಾಂಬ್ರಪ್ಪ ಬೀಳಾರ, ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ವಿಠ್ಠಲ ಲದವಾ, ಅಲ್ತಾಫ್ ಕಿತ್ತೂರ, ಪ್ರಕಾಶ ಬೆಂಡಿಗೇರಿ, ಗುರುನಾಥ ಉಳ್ಳಿಕಾಶಿ ಮಾತನಾಡಿ, ಹೋಳಿ ಹಬ್ಬದಲ್ಲಿ ಸಂಪೂರ್ಣ ಶಾಂತತೆ ಕಾಪಾಡಿಕೊಂಡು ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಪೊಲೀಸ್ ಆಯುಕ್ತ ರವೀಂದ್ರಪ್ರಸಾದ, ಮಾ. 16ರಂದು ಕಾಮಣ್ಣನನ್ನು ಪ್ರತಿಷ್ಠಾಪಿಸಿ ಮಾ. 20ರಂದು ದಹನ ಕಾರ್ಯಕ್ರಮ ನಡೆಯಲಿದೆ. ಮಹಾನಗರದಲ್ಲಿ 331 ಪ್ರದೇಶಗಳಲ್ಲಿ ಕಾಮಣ್ಣ-ರತಿದೇವಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದರು.
ಹಬ್ಬದಲ್ಲಿ ಕಿಡಿಗೇಡಿಗಳು ಬಾಲಬಿಚ್ಚದಂತೆ ಕಟ್ಟೆಚ್ಚರವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ಈಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ. ಮದ್ಯ ಮಾರಾಟ ನಿಷೇಧಕ್ಕೂ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದೂ ಅವರು ಹೇಳಿದರು. ಉಪ ಪೊಲೀಸ್ ಆಯುಕ್ತ ಸುಭಾಸ ಗುಡಿಮನಿ ಪ್ರಾಸ್ತಾವಿಕ ಮಾತನಾಡಿದರು. ಡಿಸಿಪಿಗಳಾದ ಮನೋಹರ ಜೋಗಳೆಕರ, ಎ.ಎಸ್. ಘೋರಿ ಉಪಸ್ಥಿತರಿದ್ದರು.