ಶಾಂತಿಯಿಂದ ಹೋಳಿ ಆಚರಿಸಿ
ಧಾರವಾಡ: ಈ ಬಾರಿ ಹೋಳಿ ಹಬ್ಬವು ಲೋಕಸಭಾ ಚುನಾವಣೆ, ದ್ವಿತೀಯ ಪಿಯುಸಿ ಪರೀಕ್ಷೆಯೊಂದಿಗೆ ಬಂದಿದ್ದು, ಅವಳಿ ನಗರದ ಜನತೆ ಶಾಂತಿಯುತವಾಗಿ ಹೋಳಿ ಆಚರಿಸಬೇಕು ಎಂದು ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ್ ತಿಳಿಸಿದ್ದಾರೆ.
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಗುರುವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹೋಳಿ ಹಬ್ಬದಾಚರಣೆಯಲ್ಲಿ ಯಾವುದೇ ರೀತಿಯ ಅವಘಡಕ್ಕೆ ಆಸ್ಪದವಾಗದಂತೆ ಮಾ. 17ರಂದು ಮದ್ಯ ಮಾರಾಟ ನಿಷೇಧಿಸಲಾಗುವುದು. ಅಲ್ಲದೇ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ ನಡೆಸುತ್ತಿರುವುದರಿಂದ ಅವರಿಗೆ ತೊಂದರೆ ಆಗದ ರೀತಿಯಲ್ಲಿ ಹೋಳಿ ಆಚರಿಸಿದರೆ ಒಳ್ಳೆಯದು ಎಂದರು.
ಪಾಲಿಕೆಯ ಮಾಜಿ ಉಪಮೇಯರ್ ಐ.ಎಂ. ನದಾಫ ಮಾತನಾಡಿ, ಸಂಭ್ರಮದಿಂದ ಆಚರಿಸಲೆಂದೇ ಹಬ್ಬಗಳು ಬರುತ್ತವೆ. ಆದರೆ ಇಂದಿನ ದಿನಗಳಲ್ಲಿ ಹಬ್ಬಗಳೆಂದರೆ ಭಯದ ವಾತಾವರಣ ಸೃಷ್ಟಿಯಾಗುತ್ತಿವೆ. ಯಾರಿಗೆ ಹೋಳಿ ಆಡಲು ಆಸಕ್ತಿ ಇಲ್ಲವೋ ಅವರ ಮೇಲೆ ಬಣ್ಣ ಹಾಕಬಾರದು. ಹಾಗೆಯೇ ಮಾಧ್ಯಮಗಳು ಯಾವುದೇ ಊರಿನಲ್ಲಿ ನಡೆದ ಅಹಿತಕರ ಘಟಣೆಗಳನ್ನು ಅತಿ ವೈಭವೀಕರಿಸಬಾರದು ಎಂದರು.
ಪಾಲಿಕೆ ಸದಸ್ಯ ಸುಭಾಷ ಶಿಂಧೆ ಮಾತನಾಡಿದರು. ಹಿರಿಯರಾದ ಐ.ಬಿ. ಹೊಸಕುಂಬಾರ ಮಾತನಾಡಿ, ಕಾಮಣ್ಣನ ಹಬ್ಬದಂದು ಯಾರೂ ರಸ್ತೆಯ ನಿಯಮಗಳನ್ನು ಪಾಲಿಸುವುದಿಲ್ಲ. ಒಂದು ಬೈಕ್ನಲ್ಲಿ ಮೂರ್ನಾಲ್ಕು ಜನರು ಪ್ರಯಾಣಿಸುತ್ತಾರೆ. ಇದರಿಂದ ಅಪಘಾತಗಳು ಹೆಚ್ಚಾಗುವ ಸಂಭವವಿದ್ದು, ಈ ರೀತಿ ಚಾಲನೆ ನಿರ್ಬಂಧಿಸಬೇಕು ಎಂದರು.
ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸುಭಾಷ ಗುಡಿಮನಿ, ಪಾಲಿಕೆ ಸದಸ್ಯ ಯಾಸಿನ್ ಹಾವೇರಿಪೇಟ, ಈರಣ್ಣ ಹಪ್ಪಳಿ, ಡಿ.ಬಿ. ನವಲಗುಂದಕರ, ಡಿಸಿಪಿ ಎಂ.ಎನ್. ಜೋಗಳೇಕರ, ಎಸಿಪಿ ಎಚ್.ಎಸ್. ಕೇರಿ ಮುಂತಾದವರು ಇದ್ದರು.