ಸಾಲ ವಸೂಲಿ ನಿಲ್ಲಿಸುವಂತೆ ರೈತರಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 13
ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಟ್ರ್ಯಾಕ್ಟರ್ ಸಾಲ ಮರುಪಾವತಿ ವೇಳೆ ಬಡ್ಡಿಯಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಧಾರವಾಡ ಜಿಲ್ಲೆಯ ಲೀಡ್ ಬ್ಯಾಂಕ್ನ ಅಧಿಕಾರಿಗಳು ರೈತರಿಗೆ ಭರವಸೆ ನೀಡಿದ್ದಾರೆ.
ಗುರುವಾರ ಅಖಿಲ ಕರ್ನಾಟಕ ಕೃಷಿ ಟ್ರ್ಯಾಕ್ಟರ್ ಮಾಲೀಕರ ಸಂಘದಿಂದ ರೈತರಿಂದ ಒತ್ತಾಯಪೂರ್ವಕ ಸಾಲ ವಸೂಲಿ ಮತ್ತು ಟ್ರ್ಯಾಕ್ಟರ್ ಜಪ್ತಿ ಕ್ರಮ ವಿರೋಧಿಸಿ ಇಲ್ಲಿನ ಲೀಡ್ ಬ್ಯಾಂಕ್ ಆಗಿರುವ ವಿಜಯಾ ಬ್ಯಾಂಕ್ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಬ್ಯಾಂಕಿನ ಅಧಿಕಾರಿಗಳು ರೈತರಿಗೆ ಈ ಭರವಸೆ ನೀಡಿದ್ದಾರೆ.
ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ಬೆಳೆ ನಷ್ಟದಿಂದಾಗಿ ಸಾಲ ಮಾಡಿ ಟ್ರ್ಯಾಕ್ಟರ್ ಖರೀದಿಸಿದ ರೈತರಿಗೆ ಸಾಲ ಮರುಪಾವತಿ ಮಾಡುವ ಸ್ಥಿತಿಯಲ್ಲಿಲ್ಲ. ಆದರೆ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಟ್ರ್ಯಾಕ್ಟರ್ ಖರೀದಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ನೀಡಿದ್ದ ಸಾಲವನ್ನು ಮರುಪಾವತಿ ಮಾಡುವಂತೆ ನೋಟಿಸು ಜಾರಿಗೊಳಿಸುತ್ತಿದ್ದಾರೆ. ಇದರ ಜೊತೆಗೆ ಅನೇಕ ಬಾರಿ ರೈತರ ಟ್ರ್ಯಾಕ್ಟರ್ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಸಾಲ ಮರುಪಾವತಿಗೆ ಒಂದು ವರ್ಷ ಅವಧಿ ವಿಸ್ತರಿಸಬೇಕು. ಆಲ್ಲದೇ ಈಗಾಗಲೇ ಜಪ್ತಿ ಮಾಡಿಕೊಂಡಿರುವ ಟ್ರ್ಯಾಕ್ಟರ್ಗಳನ್ನು ರೈತರಿಗೆ ಮರಳಿಸಬೇಕು ಮತ್ತು ಇನ್ನು ಒಂದು ವರ್ಷ ಕಾಲ ಟ್ರ್ಯಾಕ್ಟರ್ಗಳನ್ನು ಜಪ್ತಿ ಮಾಡಬಾರದು ಎಂದು ಆಗ್ರಹಿಸಿದರು.
ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 600ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಬಿ. ಐನಾವತಿ, ಹಾವೇರಿ ಜಿಲ್ಲಾಧ್ಯಕ್ಷ ರಾಮಣ್ಣ ಬೊಮ್ಮೋಜಿ, ಗದಗ ಜಿಲ್ಲಾಧ್ಯಕ್ಷ ಮುತ್ತಣ್ಣ, ಧಾರವಾಡ ಜಿಲ್ಲಾಧ್ಯಕ್ಷ ಮಲ್ಲಿಕಾಜಪ್ಪ ಇಟಗೇರಿ ಇದ್ದರು.