ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾಮಗಾರಿ ಅವಾಂತರ: ನೀರಿಗೆ ತತ್ವಾರ

Lingaraj Badiger
Updated On : 15 Mar 2014, 12:40 pm

- ಬಿ. ಕೆ. ಮಹೇಂದ್ರ
ಹುಬ್ಬಳ್ಳಿ: ಮಹಾನಗರದಲ್ಲಿ ಆಮೆಗತಿಯಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿ ಕುಡಿಯುವ ನೀರಿನ ಪೂರೈಕೆಗೆ ದಿನದಿಂದ ದಿನಕ್ಕೆ ಸಾಕಷ್ಟು ಸಮಸ್ಯೆ ಹುಟ್ಟು ಹಾಕುತ್ತಿದ್ದು ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಳಚರಂಡಿ ಕಾಮಗಾರಿ ನಿರ್ವಹಿಸುತ್ತಿರುವ ಕೆಯುಐಡಿಎಫ್‌ಸಿ, ಹೆಸ್ಕಾಂ, ಟೆಲಿಕಾಂ ಸೇರಿದಂತೆ ಸಾರ್ವಜನಿಕರು ಆಗಾಗ ವಿವಿಧ ನೆಲವನ್ನು ಅಗೆಯುತ್ತಿರುವುದರಿಂದ ನೆಲದೊಳಗೆ ಹಾಕಿರುವ ಕುಡಿಯುವ ನೀರು ಪೂರೈಕೆಯ ಪೈಪ್‌ಲೈನ್‌ಗಳು ಒಡೆದು ನೀರು ಪೂರೈಕೆಯಲ್ಲಿ ವ್ಯತ್ಯಯ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಗೋಕುಲ ರಸ್ತೆ ಕೆಎಸ್‌ಆರ್‌ಟಿಸಿ ಡಿಪೋ ಪಕ್ಕದಲ್ಲಿ ಒಳಚರಂಡಿ ಪೈಪ್ ಅಳವಡಿಸುವ ಧಾವಂತದಲ್ಲಿ ಕೆಯುಐಡಿಎಫ್‌ಸಿ ಕಾರ್ಮಿಕರು, ಕುಡಿಯುವ ನೀರು ಪೂರೈಸುವ ಮುಖ್ಯ ಕೊಳವೆಗೆ ಪೆಟ್ಟು ಹಾಕಿದ ಪರಿಣಾಮ ಐದಾರು ದಿನಗಳಿಂದ ಮಹಾನಗರದ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಗೋಕುಲ ಆಸುಪಾಸು ಜಲಮಂಡಳಿ, ಬುಧವಾರವೇ ನೀರು ಪೂರೈಸಬೇಕಿತ್ತು. ಪೈಪ್‌ನಲ್ಲಿನ ದೋಷದಿಂದಾಗಿ ಗುರುವಾರ ಪೂರೈಸುವುದಕ್ಕೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಈ ಮಧ್ಯೆ ಗುರುವಾರ ಮಧ್ಯರಾತ್ರಿ ಕೆಐಯುಡಿಎಫ್‌ಸಿ ಕಾರ್ಮಿಕರು, ಒಳಚರಂಡಿ ಪೈಪ್ ಜೋಡಣೆಗಾಗಿ ತಗ್ಗು ಅಗೆಯುವಾಗ ಆಕಸ್ಮಿಕವಾಗಿ ಕುಡಿಯುವ ನೀರಿನ ಪೈಪ್‌ಗೆ ತಾಗಿ ಪೈಪ್ ಒಡೆದಿದೆ.
ಶುಕ್ರವಾರ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಜನರು ಮಧ್ಯಾಹ್ನದವರೆಗೂ ನೀರು ಪೂರೈಕೆಯಾಗದಿರುವುದರಿಂದ ಜಲಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಿ ನೀರು ಪೂರೈಸದೆ ಇರುವುದಕ್ಕೆ ಕಾರಣವೇನು ಎಂದು ತಿಳಿಯಲು ಯತ್ನಿಸಿದರು.
ಜನರ ಆಕ್ರೋಶ: ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್‌ಗೆ ಪೆಟ್ಟಾಗಿದ್ದು ಅದನ್ನು ಶೀಫ್ರದಲ್ಲೇ ದುರಸ್ತಿಗೊಳಿಸಿ ಶನಿವಾರ ಬೆಳಗ್ಗೆ ನೀರು ಪೂರೈಸಲಾಗುವುದು ಎಂದು ಜಲಮಂಡಳಿ ಅಧಿಕಾರಿಗಳು  ಜನರ ಮನವರಿಕೆ ಮಾಡುವುದಕ್ಕೆ ಹರಸಾಹಸ ಪಡುವಂತಾಯಿತು.
ತಗ್ಗಿನಲ್ಲಿ ಟ್ಯಾಂಕರ್: ಐದಾರು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದೆ ಆಕ್ರೋಶಗೊಂಡಿದ್ದ ಹಳೆಹುಬ್ಬಳ್ಳಿಯ ಭಾಗಶಃ ಪ್ರದೇಶದ ಜನರಿಗೆ ಟ್ಯಾಂಕರ್ ಮೂಲಕವಾದರೂ ಕುಡಿಯುವ ನೀರು ಪೂರೈಸೋಣ ಎಂದು ಜಲಮಂಡಳಿ ಮುಂದಾದರೂ ಅಸಾಧ್ಯವಾದ ಪ್ರಸಂಗ ನಡೆದಿದ್ದು ಕೆಯುಐಡಿಎಫ್‌ಸಿಯವರ ಕಾರ್ಯವೈಖರಿಗೆ ಶ್ರೀಸಾಮಾನ್ಯರು ಮತ್ತಷ್ಟು ಆಕ್ರೋಶಗೊಂಡರು.
ನೇಕಾರನಗರ ಪ್ರದೇಶದಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲು ಬರುತ್ತಿದ್ದ ಜಲಮಂಡಳಿ ಎರಡ್ಮೂರು ವಾಹನಗಳು ಕಸಬಾಪೇಟ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳಲ್ಲಿ ಕೆಯುಐಡಿಎಫ್‌ಸಿಯವರು ಅಗೆದ ತಗ್ಗಿನಲ್ಲಿ ಸಿಕ್ಕಿ ಹಾಕಿಕೊಂಡ ಘಟನೆಗಳೂ ಸಂಭವಿಸಿವೆ. ನೀರು ತುಂಬಿದ ಟ್ಯಾಂಕರ್‌ಗಳನ್ನು ತಗ್ಗುಗಳಿಂದ ಹೊರಗೆ ತರಲು ಸಾಧ್ಯವಾಗದೆ, ಟ್ಯಾಂಕರ್ ನೀರನ್ನು ಗಟಾರುಗಳಿಗೆ ಹರಿಬಿಟ್ಟು ವಾಹನಗಳನ್ನು ತೆಗ್ಗುಗಳಿಂದ ಹೊರಗೆ ತರಬೇಕಾಯಿತು. ಅನಾವಶ್ಯಕವಾಗಿ ಕುಡಿಯುವ ನೀರು ಗಟಾರ್‌ನಲ್ಲಿ ಹರಿಯುತ್ತಿರುವುದನ್ನು ನೋಡಿದ ಅಕ್ಕಪಕ್ಕ ಜನತೆ ಮಮ್ಮಲ ಮರುಗಿದರು.
ಇತರೆ ಕಾಮಗಾರಿ: ಹೆಸ್ಕಾಂ ಹಾಗೂ ಟೆಲಿಕಾಂ ಇಲಾಖೆಯವರು ವಿವಿಧ ಪ್ರದೇಶಗಳಲ್ಲಿ ಒಂದಿಲ್ಲೊಂದು ಕಾಮಗಾರಿ ಕೈಗೊಳ್ಳುವಾಗ ಆಕಸ್ಮಿಕವಾಗಿ ಕುಡಿಯುವ ನೀರಿನ ಪೈಪ್‌ಗಳಿಗೆ ತಾಗಿ ಇಂತಹ ಅವಾಂತರ ಸೃಷ್ಟಿಯಾಗುತ್ತಲೇ ಇವೆ. ಕುಡಿಯುವ ನೀರು ಪೂರೈಸುವ ಕೊಳವೆ ಮಾರ್ಗಗಳು ತೀರಾ ಹಳೆಯದಾಗಿದ್ದರಿಂದ ಸ್ವಲ್ಪವೂ ಅಜಾಗರೂಕತೆಯ ಪರಿಣಾಮ ಶ್ರೀಸಾಮಾನ್ಯರ ಮೇಲೆ ಆಗುತ್ತದೆ ಎನ್ನುವುದಕ್ಕೆ ಗುರುವಾರ ಮಧ್ಯರಾತ್ರಿ ನಡೆದ ಘಟನೆ ಉದಾಹರಣೆ. ಕೆಯುಐಡಿಎಫ್‌ಸಿ ಈಗಲಾದರೂ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುವುದೇ ಎಂಬುದನ್ನು ಕಾದುನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement