ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಯಾರು?

Lingaraj Badiger
Updated On : 15 Mar 2014, 12:35 pm

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 14
ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ ಎನಿಸಿದ್ದ ಧಾರವಾಡ (ಹಿಂದಿನ ಉತ್ತರ) ಲೋಕಸಭೆ ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ಕಾರ್ಯಕರ್ತರು ಉತ್ಸುಕರಾಗಿದ್ದರೆ, ಪಕ್ಷದ ವರಿಷ್ಠರು ಇನ್ನೂ ತಮ್ಮ ಅಭ್ಯರ್ಥಿ ಹೆಸರನ್ನು ಘೋಷಿಸದಿರುವುದು ನಿರಾಸೆ ಮೂಡಿಸಿದೆ. ಚುನಾವಣೆಯ ಅಧಿಕೃತ ಅಧಿಸೂಚನೆ ಹೊರ ಬೀಳಲು ಒಂದೇ ವಾರ ಬಾಕಿ ಇದೆ. ಈಗಲೂ ಹಲವು ಮುಖಂಡರ ಹೆಸರುಗಳು ಕೇಳಿ ಬರುತ್ತಿದ್ದು, ಅಧಿಕೃತವಾಗಿ ಯಾರ ಹೆಸರೂ ಘೋಷಣೆಯಾಗುತ್ತಿಲ್ಲ. ಮಾಜಿ ಸಂಸದ ಮಂಜುನಾಥ ಕುನ್ನೂರ ಹೆಸರು ಒಂದು ಹಂತದಲ್ಲಿ ಅಂತಿಮಗೊಂಡಿತ್ತು. ಆಗ ಮುಖ್ಯಮಂತ್ರಿಗಳಿಗೆ ಆಪ್ತರಾದ ಸಿ.ಎಂ. ಇಬ್ರಾಹಿಂ ಹೆಸರು ಹೊರಬಿತ್ತು. ಈಗ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಅವರ ಹೆಸರು ಅಂತಿಮಗೊಂಡಿದೆ ಎನ್ನಲಾಗುತ್ತಿದೆ. ರಾಜ್ಯದ ಮುಖಂಡರು ಪಕ್ಷದ ವರಿಷ್ಠರಿಗೆ ಖಾದ್ರಿ ಹೆಸರನ್ನು ಮಾತ್ರ ಕಳುಹಿಸಿಕೊಟ್ಟಿದ್ದಾರೆ. ಇನ್ನೇನು ದೆಹಲಿ ಮಟ್ಟದಿಂದ ಒಪ್ಪಿಗೆ ಬರಬೇಕಷ್ಟೇ ಎನ್ನಲಾಗುತ್ತಿದೆ.
ಕಾಂಗ್ರೆಸ್ ಗೊಂದಲ: ಈ ಮಧ್ಯೆ ಬಿಜೆಪಿ ತನ್ನ ಅಭ್ಯರ್ಥಿ, ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರಿಗೆ ಹ್ಯಾಟ್ರಿಕ್ ಗೆಲವು ತಂದುಕೊಡಲು ಸಂಪೂರ್ಣ ಸನ್ನದ್ಧವಾಗಿ ಮುನ್ನುಗ್ಗುತ್ತಿದೆ. ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೂ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದರು. ಆದರೆ, ಕಾಂಗ್ರೆಸ್ಸಿನಿಂದ ಆಯ್ಕೆಗೊಂಡಿರುವ ಶಾಸಕರು ಪಕ್ಷದ ಅಭ್ಯರ್ಥಿ ಯಾರೆಂಬುದೂ ತಿಳಿಯದೆ ಚುನಾವಣಾ ಪ್ರಚಾರ ಹೇಗೆ ಆರಂಭಿಸುವುದು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಧಾರವಾಡ ಕ್ಷೇತ್ರ ಮುಸ್ಲಿಂ ಅಭ್ಯರ್ಥಿಗೆ ಅಷ್ಟೊಂದು ಅನುಕೂಲಕರವಲ್ಲ. ಹಿಂದಿನ ಚುನಾವಣೆಗಳ ಫಲಿತಾಂಶ ಗಮನಿಸಿದಾಗ ಆಗಿನ ಧಾರವಾಡ ದಕ್ಷಿಣ (ಈಗಿನ ಹಾವೇರಿ) ಲೋಕಸಭಾ ಕ್ಷೇತ್ರ ಮುಸ್ಲಿಂ ಅಭ್ಯರ್ಥಿ ಸ್ವಲ್ಪ ಮಟ್ಟಿಗೆ ಅನುಕೂಲಕರ ಎಂಬ ಅನಿಸಿಕೆ ದಟ್ಟವಾಗಿದೆ. ಧಾರವಾಡ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಬಿಜೆಪಿಯ ಪ್ರಹ್ಲಾದ ಜೋಶಿ ಅವರಿಗೆ ವಾಕ್ ಓವರ್ ನೀಡಿದಂತೆಯೇ ಸರಿ. ಲಿಂಗಾಯತ ಅಥವಾ ಹಿಂದುಳಿದ ವರ್ಗಗಳ ಅಭ್ಯರ್ಥಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಇದೆ.
ಇದೇ ವಾದವನ್ನು ಮುಂದಿಟ್ಟುಕೊಂಡು ಲಿಂಗಾಯತ ಪಂಚಮಸಾಲಿ ಜನಾಂಗಕ್ಕೆ ಸೇರಿದ ಮಂಜುನಾಥ ಕುನ್ನೂರ ಮತ್ತು ಕುರುಬ ಸಮಾಜಕ್ಕೆ ಸೇರಿದ ಲೋಹಿತ ನಾಯ್ಕರ ಟಿಕೆಟ್ ಪಡೆಯಲು ಕೊನೆ ಗಳಿಗೆಯ ಪ್ರಯತ್ನ ಮುಂದುವರಿಸಿದ್ದಾರೆ. ಏತನ್ಮಧ್ಯೆ, ಹುಬ್ಬಳ್ಳಿಯ ವೈದ್ಯ, ಲಿಂಗಾಯತ ಸಮಾಜದ ಡಾ೤ ಮಹೇಶ ನಾಲವಾಡ ಅವರೂ ಟಿಕೆಟ್‌ಗೆ ದುಂಬಾಲು ಬಿದ್ದಿದ್ದಾರೆ.
ಕುನ್ನೂರ ಬೇಡವಂತೆ!: ಮೊದಲು ಕಾಂಗ್ರೆಸ್ ಶಾಸಕರಾಗಿದ್ದು, ನಂತರ ಬಿಜೆಪಿ ಸೇರಿ ಧಾರವಾಡ ದಕ್ಷಿಣ ಕ್ಷೇತ್ರದ ಲೋಕಸಭೆ ಸದಸ್ಯರಾಗಿದ್ದ ಮಂಜುನಾಥ ಕುನ್ನೂರ ಪ್ರಧಾನಿ ಮನಮೋಹನಸಿಂಗ್ ವಿರುದ್ಧ ಅವಿಶ್ವಾಸ ಮಂಡನೆ ಸಂದರ್ಭದಲ್ಲಿ ಯುಪಿಎ ಪರ ಅಡ್ಡ ಮತದಾನ ಮಾಡಿ ಸರ್ಕಾರ ಉಳಿಯಲು ನೆರವಾಗಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು 2009ರಲ್ಲಿ ಧಾರವಾಡ ಕ್ಷೇತ್ರದ ಟಿಕೆಟ್ ನೀಡಿತ್ತು. ಆದರೆ, ಕುನ್ನೂರ ಸೋಲು ಅನುಭವಿಸಿದ್ದರು. ಅವರ ಪಂಚಮಸಾಲಿ ಲಿಂಗಾಯತ ಕಾರ್ಡ್ ಕೆಲಸ ಮಾಡಲಿಲ್ಲ. ಮಂಜುನಾಥ ಕುನ್ನೂರ ಯುಪಿಎ ಸರ್ಕಾರದ ಪರ ಅಡ್ಡ ಮತದಾನ ಮಾಡಿದ್ದಕ್ಕೆ ಪ್ರತಿಫಲವಾಗಿ ಲೋಕಸಭೆ ಚುನಾವಣೆ ಟಿಕೆಟ್ ಪಡೆದಿದ್ದರು. ಪಕ್ಷಾಂತರ ಮಾಡಿದ್ದ ಅವರನ್ನು ಆಗ ಸಹಿಸಿಕೊಂಡಿದ್ದೆವು. ಆ ಚುನಾವಣೆಯಲ್ಲಿ ಅವರು ಸೋತ ಮೇಲೆ ಮತ್ತೆ ಟಿಕೆಟ್ ಕೇಳುವ ನೈತಿಕ ಹಕ್ಕು ಮತ್ತು ಅರ್ಹತೆ ಹೊಂದಿಲ್ಲ. ಆದ್ದರಿಂದ ಪಕ್ಷಕ್ಕಾಗಿ ದುಡಿದ ಬೇರೆಯವರಿಗೆ ಪಕ್ಷ ಟಿಕೆಟ್ ನೀಡಬೇಕು ಎಂಬುದು ಕಾಂಗ್ರೆಸ್ ಕೆಲ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.
ಸಾಮರ್ಥ್ಯವೊಂದೇ ಮಾನದಂಡವಲ್ಲ: ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯ ಗೆಲುವಿನ ಸಾಮರ್ಥ್ಯವೊಂದೇ ಮಾನದಂಡವಲ್ಲ. ಸಾಮಾಜಿಕ ನ್ಯಾಯ, ಜಾತಿವಾರು ಹಂಚಿಕೆಯೂ ಟಿಕೆಟ್ ವಿತರಣೆಯಲ್ಲಿ ಪರಿಗಣನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮಂಜುನಾಥ ಕುನ್ನೂರ, ಸಿ.ಎಂ. ಇಬ್ರಾಹಿಂ, ಮಹೇಶ ನಾಲವಾಡ, ಲೋಹಿತ ನಾಯ್ಕರ ಅಥವಾ ಅಜ್ಜಂಪೀರ ಖಾದ್ರಿಯೋ ಇನ್ನೂ ಕಾದು ನೋಡಬೇಕಿದೆ.
- ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement