ಬದಲಾಗದ ಮಹಿಳೆಯ ಸ್ಥಾನಮಾನ: ರಾಜಶ್ರೀ
ಧಾರವಾಡ: ಸಾಕ್ಷರತೆ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ಕೂಡ ಮಹಿಳೆಯರ ಸ್ಥಾನ-ಮಾನ ಬದಲಾವಣೆಯಾಗಿಲ್ಲ. ಮಹಿಳೆಯರ ಬಗ್ಗೆ ಇರುವ ದೃಷ್ಟಿಕೋನ ಮನೆಯಿಂದಲೇ ಬದಲಾಗಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿತ್ತಾಧಿಕಾರಿ ರಾಜಶ್ರೀ ಎಸ್. ಹೇಳಿದರು.
ರಾಯಾಪುರದ ಎಸ್‌ಜೆಎಂವಿ ಮಹಾಂತ ಕಾಲೇಜು ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಆಕೆಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತಿಲ್ಲ. ಸಮಾನತೆ ಕೇವಲ ತೋರಿಕೆಯಾಗದೆ ಅಂತರಾಳದಿಂದ ಬರುವಂತಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಎನ್.ಆರ್. ಬಾಳಿಕಾಯಿ, ಹೆಣ್ಣು-ಗಂಡು ಇಬ್ಬರು ಕೈ ಜೋಡಿಸಿದಾಗ ಸಮಾಜ ಅಭಿವೃದ್ಧಿ ಸಾಧ್ಯ. ಆರೋಗ್ಯಕರ ಸಮಾಜದ ಬದಲಾವಣೆಯಲ್ಲಿ ಪುರುಷ ಹಾಗೂ ಮಹಿಳೆಯರ ಮನಸ್ಥಿತಿ ಬದಲಾಗಬೇಕಿದೆ. ಪುರುಷ ಮತ್ತು ಮಹಿಳೆ ಸಮಾನವಾಗಿ ಅರ್ಥೈಸಿಕೊಂಡು ಭವಿಷ್ಯ ರೂಪಿಸಿಕೊಳ್ಳಲಿ. ನಾಯಕತ್ವ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ವವಾದದ್ದು ಇಂದು ಎಂದಿಗಿಂತಲೂ ಹೆಣ್ಣುಮಕ್ಕಳ ಜವಾಬ್ದಾರಿ ಹೆಚ್ಚಾಗಿದೆ. ಅದನ್ನು ಸಮಾಜ ಗೌರವಿಸಲೇ ಬೇಕಾಗಿದೆ ಎಂದು ಹೇಳಿದರು.
ಪತ್ರಕರ್ತೆ ವಿಶಾಲಾಕ್ಷಿ ಅಕ್ಕಿ ಮಾತನಾಡಿದರು. ವಿದ್ಯಾರ್ಥಿನಿಯರ ಸಂಘದ ಕಾರ್ಯಾಧ್ಯಕ್ಷ ಪ್ರೊ. ಜಿ.ಸಿ. ಕಡ್ಡಿಪುಡಿ, ಪ್ರೊ. ಜೆ.ಪಿ. ಯಂಡಿಗೇರಿ, ಡಾ. ಸುಜಾತಾ ನಿರೂಪಿಸಿದರು. ಡಾ. ಸಿ.ಎಂ. ಕಡಕೋಳ, ಗಾಯತ್ರಿ ವಠಾರಕರ ಇದ್ದರು.