ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕನ್ನಡಪರ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿ

Lingaraj Badiger
Updated On : 16 Mar 2014, 11:41 am

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 15
ಕನ್ನಡ ಭಾಷೆ, ನೆಲ, ಜಲದ ಉಳಿಯುವಿಗೆ ಹೋರಾಡುತ್ತಿರುವ ಸಂಘಟನೆಗಳನ್ನು ಸರ್ಕಾರ ನೈತಿಕವಾಗಿ, ಆರ್ಥಿಕವಾಗಿ ಸಬಲೀಕರಣಗೊಳಿಸಬೇಕೆಂದು ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ದೇಶದಲ್ಲಿನ ಯಾವುದೇ ಪ್ರಾದೇಶಿಕ ಭಾಷೆಗೆ ಇರದಂತಹ ಸಮಸ್ಯೆಯನ್ನು ಕನ್ನಡ ಎದುರಿಸುತ್ತಿದೆ. ಕರ್ನಾಟಕದಲ್ಲಿ ಕನ್ನಡ ತಬ್ಬಲಿಯಾಗುತ್ತಿದೆ. ಇದಕ್ಕೆ ಸರ್ಕಾರದ ಧೋರಣೆ ಕೂಡ ಕಾರಣ. ಕನ್ನಡ ಭಾಷೆ ಉಳಿವಿಗೆ ಹಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೂ ಹೆಚ್ಚಿನ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಅಂತಹ  ಸಂಘಟನೆಗಳಿಗೆ  ಸರ್ಕಾರ ಆರ್ಥಿಕವಾಗಿ ಸಹಾಯ ಮಾಡುವುದರೊಂದಿಗೆ ಕನ್ನಡ ಉಳಿವಿಗೆ ಸಕಾರಾತ್ಮಕ ನಿಲುವು ತಾಳಬೇಕೆಂದು ಹೇಳಿದರು.  ಸರ್ಕಾರ ಯಾವುದೆ ಬಾಹ್ಯ ಶಕ್ತಿಗಳಿಗೆ ಮಣಿಯದೆ ತನ್ನ ಮನೆಯ ಭಾಷೆಯ ರಕ್ಷಣೆಗೆ ಪಣತೊಡಬೇಕು. ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ  ಹಾಗೂ ತಮಿಳುನಾಡುಗಳಲ್ಲಿ ಭಾಷೆಯ ವಿಚಾರದಲ್ಲಿ ಅಲ್ಲಿಯ ಸಾಮಾನ್ಯ ಜನತೆ ಹಾಗೂ ಸರ್ಕಾರದ ನಿಲುವುಗಳು ಒಂದೆ ಆಗಿವೆ ಎಂದರು.
ಕನ್ನಡದ ಬಗ್ಗೆ ಇಲ್ಲಿಯ ಸಾಮಾನ್ಯರಲ್ಲೂ ಪ್ರೀತಿ ಗೌಣವಾಗುತ್ತಿದೆ.  ಭಾಷೆಗೆ ಬರಬೇಕಾದ ಶಕ್ತಿ ಇನ್ನೂ ಇಲ್ಲಿ  ಬರುತ್ತಿಲ್ಲ. ಸರ್ಕಾರ ಈ  ಎಲ್ಲ ಸಂಸ್ಥೆಗಳಿಗೆ ನೈತಿಕವಾಗಿ, ಅರ್ಥಿಕವಾಗಿ ಬಲ ನೀಡಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಇದರ ಸಂಪೂರ್ಣ ನೇತೃತ್ವ ವಹಿಸಿಕೊಂಡಿದೆ.  ಕನ್ನಡಪರ ಸಂಘ ಸಂಸ್ಥೆಗಳ ಈ ಸಮಸ್ಯೆಯನ್ನು ಕರ್ನಾಟಕದ ಸಮಸ್ಯೆ ಎಂದು ಸರ್ಕಾರ ಪರಿಗಣಿಸಬೇಕು ಎಂದು ಹೇಳಿದರು.
ಮಂಡ್ಯ ಕನ್ನಡ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ, ಕನ್ನಡ ನಾಡು, ನುಡಿ, ಜಲ ಸಂರಕ್ಷಣೆಗಾಗಿ ಹೋರಾಟನಿರತ ಸಂಘಟನೆಗಳು ಕೆಲವಿದ್ದರೆ, ಮತ್ತೆ ಕೆಲವು ಸಂಸ್ಥೆಗಳು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಹೋರಾಡುವ ಸಂಘಟನೆಗಳಿದ್ದು ಅವುಗಳನ್ನು ಒಂದುಗೂಡಿಸುವ ಕೆಲಸ ಆಗಬೇಕಿದೆ. ಸಂಘದ ಪದಾಧಿಕಾರಿಗಳಾದ ಪ್ರೊ. ಬಿ.ವಿ. ಗುಂಜೆಟ್ಟಿ, ಶಂಕರ ಹಲಗತ್ತಿ, ಕೃಷ್ಣ ಜೋಶಿ, ಮೋಹನ ನಾಗಮ್ಮನವರ, ಶಂಕರ ಕುಂಬಿ, ಭಾವಿಕಟ್ಟಿ, ಬಸವಪ್ರಭು ಹೊಸಕೇರಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement