ಧಾರವಾಡ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 17
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಇನ್ನುಳಿದ ಪಕ್ಷ, ಪಕ್ಷೇತರ ಅಭ್ಯರ್ಥಿಗಳು ನಗಣ್ಯ. ಇಂಥವರಿಂದಾಗಿ ಬಿಜೆಪಿ ಗೆಲುವಿಗೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತ ಪಡಿಸಿದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ರಾಜಧಾನಿ ಕಾಲೋನಿಯ ಶಿವ ಉದ್ಯಾನವನದಲ್ಲಿರುವ ಶಿವನ ಮೂರ್ತಿಗೆ ಸೋಮವಾರ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿಯೂ ಗೆಲುವು ಬಿಜೆಪಿಯದ್ದೇ. ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿಗೆ ಜನ ಮನ್ನಣೆ ನೀಡಿ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರುತ್ತಾರೆಂದರು.
ಪ್ರಮುಖ ಮೂರು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ಪೈಪೋಟಿ ನಡೆಯಲಿದೆ. ಪ್ರಮೋದ ಮುತಾಲಿಕರಾಗಲಿ, ಇನ್ಯಾರೇ ಆಗಲಿ ಬಿಜೆಪಿಯನ್ನು ಮಣಿಸಲಾಗದು. ಕಣಕ್ಕಿಳಿಯುವವರು ಇಳಿಯಲಿ ಬಿಡಿ. ಈ ಬಗ್ಗೆ ಹೆಚ್ಚಿನ ಚರ್ಚೆ, ಪ್ರತಿಕ್ರಿಯೆ ಅನಗತ್ಯ ಎಂದು ಹೇಳಿದರು.
ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳ ಆಯ್ಕೆಯ ಗೊಂದಲದಲ್ಲಿದೆ. ಜೆಡಿಎಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಎರಡೂ ಪಕ್ಷಗಳಿಗೆ ಅರ್ಹ ಅಭ್ಯರ್ಥಿಗಳು ಸಿಗುತ್ತಿಲ್ಲ. ಏತನ್ಮಧ್ಯೆ ಬಿಜೆಪಿ ಈಗಾಗಲೇ ತನ್ನ ಒಂದು ಹಂತ ಪ್ರಚಾರ ಮುಗಿಸಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಸೂಚನೆಯ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಲಾಗುತ್ತಿದೆ. ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಶೇ. 70ರಷ್ಟು ಮನೆ ಮನೆ ಪ್ರಚಾರ ಮುಗಿಸಿದೆ. ಇದೇ ವೇಳೆ ನರೇಂದ್ರ ಮೋದಿ ಗುಜರಾತದಲ್ಲಿ ಮಾಡಿರುವ ಸಾಧನೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ ಸಾಧನೆ ಜನರಿಗೆ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಜನ ಭರವಸೆ ಕೊಟ್ಟಿದ್ದಾರೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬೇರ್ಪಟ್ಟು ಕೆಜೆಪಿ ಹಾಗೂ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಹುಟ್ಟಿಕೊಂಡಿದ್ದು, ಬಿಜೆಪಿಯ ಮೇಲೆ ಪರಿಣಾಮ ಬಿತ್ತು. ಇದರ ಲಾಭ ಕಾಂಗ್ರೆಸ್ಗಾಯಿತು, ವಿನಃ ಇದು ಕಾಂಗ್ರೆಸ್ ಗೆಲುವಲ್ಲ. ಇದೀಗ ಕೆಜೆಪಿ, ಬಿಎಸ್ಆರ್ ಪುನಃ ಬಿಜೆಪಿಗೆ ಬಂದಾಗಿದೆ. ಬಿಜೆಪಿ ಮತ್ತೆ ಬಲಶಾಲಿಯಾಗಿದೆ. ಕೆಜೆಪಿ ಹಾಗೂ ಬಿಎಸ್ಆರ್ನ ಮತ್ತಷ್ಟು ಮುಖಂಡರು ಇಷ್ಟರಲ್ಲಿಯೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಯಾರಲ್ಲೂ ವೈಮನಸ್ಸು ಇಲ್ಲ ಎಂದರು.
ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನಗಳು ಬಿಜೆಪಿಯ ಪಾಲಾಗಲಿದೆ. ಇದರಲ್ಲಿ ಸಂದೇಹವೇ ಬೇಡ. ಕೇಂದ್ರ ಯುಪಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಜನತೆ ಕಂಡಾಗಿದೆ. ಇದೀಗ ರಾಜ್ಯ ಕಾಂಗ್ರೆಸ್ ಕೂಡ ಅಧಿಕಾರ ನಡೆಸುವಲ್ಲಿ ವಿಫಲವಾಗಿದೆ. ಜನರಿಗೆ ಸಿಕ್ಕ ಭರವಸೆ ಹುಸಿಯಾಗಿದೆ. ಕಾಂಗ್ರೆಸ್ನಲ್ಲಿ ಆಗಲೇ ಕಚ್ಚಾಟ ಶುರುವಾಗಿದೆ. ಇಂಥ ಪಕ್ಷವನ್ನು ಜನ ದೂರವಿಡಲಿದ್ದಾರೆಂದರು.
ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ, ಇದೇ ವೇಳೆ ಮೋದಿ ಎಫೆಕ್ಟ್ ಕೂಡ ರಾಜ್ಯದಲ್ಲಾಗಲಿದೆ. ಗುಜರಾತನಲ್ಲಾಗಿರುವ ಅಭಿವೃದ್ಧಿ ನಮ್ಮಲ್ಲಿಯೂ ಆಗಲಿ ಎಂದು ಬಯಸುತ್ತಿದ್ದಾರೆ. ಗುಜರಾತನ ಚಿತ್ರಣವನ್ನೇ ಬದಲಿಸಿರುವ ಮೋದಿ ದೇಶದ ಪ್ರಧಾನಿಯಾದರೆ ತಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ಜನ ಆಶಾಭಾವ ಹೊಂದಿದ್ದಾರೆ. ಈ ಕಾರಣಕ್ಕಾಗಿ ಜನ ಬಿಜೆಪಿಯನ್ನು ಬೆಂಬಲಿಸಲಿಸುತ್ತಾರೆನ್ನುವ ವಿಶ್ವಾಸವಿದೆ ಎಂದರು.
ಬಳಿಕ ಪಾದಯಾತ್ರೆಯ ಮೂಲಕ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿ ಪ್ರಚಾರ ನಡೆಸಲಾಯಿತು. ವಾರ್ಡ್ ನಂ. 35ರಲ್ಲಿ ವಿವಿಧ ಹಿರಿಯ ಮುಖಂಡರ ಮನೆಗಳಿಗೆ ತೆರಳಿ ಜೋಶಿ ಹಾಗೂ ಶೆಟ್ಟರ್ ಮಾತುಕತೆ ನಡೆಸಿದರು.
ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ, ಮೋಹನ ಲಿಂಬಿಕಾಯಿ, ಪ್ರದೀಪ ಶೆಟ್ಟರ್, ಮಲ್ಲಿಕಾರ್ಜುನ ಸಾವಕಾರ, ವೀರೇಶ ಸಂಗಳದ, ನಾಗೋಸಾ ಕಲಬುರ್ಗಿ, ಲಕ್ಷ್ಮಣ ಗಂಡಗಾಳೇಕರ ಮತ್ತಿತರರಿದ್ದರು.