ಪತ್ರಕರ್ತರ ವೃತ್ತಿ ದೌರ್ಬಲ್ಯಗಳಿಗೆ ಪ್ರಾಥಮಿಕ ಶಿಕ್ಷಣ ಕಾರಣ: ವಾನಳ್ಳಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 16
ಪತ್ರಿಕೋದ್ಯಮ ಶಿಕ್ಷಣ ಪೂರೈಸಿ ಮಾಧ್ಯಮ ಕ್ಷೇತ್ರದಲ್ಲಿ ಕಾಲಿರಿಸಿದ ಯುವ ಪೀಳಿಗೆಯ ಪತ್ರಕರ್ತರಲ್ಲಿ ವೃತ್ತಿ ದೌರ್ಬಲ್ಯಗಳಿಗೆ ಪ್ರಾಥಮಿಕ ಹಂತದ ಶಿಕ್ಷಣವೇ ಕಾರಣ ಎಂದು ಮೈಸೂರು ವಿಶ್ವವಿದ್ಯಾಲಯದ ಸಾಮರ್ಥ್ಯಾಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ ನಿರಂಜನ ವಾನಳ್ಳಿ ಹೇಳಿದರು.
ಭಾನುವಾರ ಶ್ರೀ ಕಾಡಸಿದ್ದೇಶ್ವರ ಕಾಲೇಜು ಮತ್ತು ಕೆಎಲ್ಇ ಧ್ವನಿ ಸಹಯೋಗದಲ್ಲಿ ಆಯೋಜಿಸಿದ್ದ ಮಾಧ್ಯಮೋತ್ಸವ ಮತ್ತು ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸ್ನಾತಕೋತ್ತರದಲ್ಲಿ ಪತ್ರಿಕೋದ್ಯಮ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳ ಭಾಷೆಯ ಮೂಲ ಸಂಗತಿಗಳನ್ನು ಬೋಧಿಸಲಿಕ್ಕಾಗುವುದಿಲ್ಲ. ಇದರ ಜತೆಗೆ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರ ನೇಮಕಾತಿಯಲ್ಲೂ ಕೆಲವು ಸಾರಿ ಪ್ರತಿಭೆಗಿಂತ ಇನ್ನಾವುದೋ ಸಂಗತಿಗಳಿಗೆ ಪ್ರಾಧಾನ್ಯ ನೀಡುತ್ತಿರುವುದರಿಂದ ಉನ್ನತ ಶಿಕ್ಷಣದಲ್ಲೂ ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ಹೇಳಿದರು.
ಮಾಧ್ಯಮ ಕ್ಷೇತ್ರಕ್ಕೆ ಅತ್ಯುತ್ತಮ ಪತ್ರಕರ್ತರನ್ನು ನೀಡಬೇಕಾದರೆ ಮೊದಲು ಪತ್ರಿಕೋದ್ಯಮ ಶಿಕ್ಷಣವನ್ನು ಇತರ ಶಿಕ್ಷಣಗಳಲ್ಲಿ ನೋಡದೆ ವೃತ್ತಿ ಶಿಕ್ಷಣದಂತೆ ಪರಿಗಣಿಸುವ ಮೂಲಕ ಮಾಧ್ಯಮ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಪತ್ರಿಕೋದ್ಯಮದತ್ತ ಆಸಕ್ತಿ ಇಲ್ಲ. ರಾಜ್ಯದಲ್ಲಿ 100ಕ್ಕೂ ಹೆಚ್ಚು ಪದವಿ ಕಾಲೇಜುಗಳಲ್ಲಿ ಪತ್ರಿಕೋದ್ಯಮ ಕಲಿಸಲಾಗುತ್ತಿದೆ. ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲೂ ಪತ್ರಿಕೋದ್ಯಮ ಆಸಕ್ತಿಯ ಕ್ಷೇತ್ರವಾಗಿ ಉಳಿದಿಲ್ಲ ಎಂದು ಹೇಳಿದರು.
ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಮಾಧ್ಯಮ ಕ್ಷೇತ್ರಕ್ಕೆ ಕಾಲಿರಿಸಲಿರುವ ವಿದ್ಯಾರ್ಥಿಗಳು ದೇಶ ಹೇಗೆ ಇದೆ ಎಂದು ನೋಡುವುದಕ್ಕೆ ದೇಶದ ಹಳ್ಳಿಗಳ ಪರಿಸ್ಥಿತಿ ಏನು ಎನ್ನುವುದನ್ನು ನೋಡಬೇಕಿದೆ. ಪ್ರಕೃತಿ ವಿಕೋಪವಾಗಲಿ, ಬರ ಪರಿಸ್ಥಿತಿಯೇ ಇರಲಿ ಅದು ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಹಸಿರು ಹುಲ್ಲುಗಾವಲು ಆಗಿದೆ. ಆದರೆ ಸಂತ್ರಸ್ತರಿಗೆ ಮಾತ್ರ ನೆರವು ದಕ್ಕುತ್ತಿಲ್ಲ. ಈ ನಿಟ್ಟಿನಲ್ಲಿ ಯುವ ಪತ್ರಕರ್ತರು ಕಾರ್ಯೋನ್ಮುಖವಾಗಬೇಕಿದೆ ಎಂದು ಹೇಳಿದರು.
ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ, ಅಭಿವೃದ್ಧಿ ಪತ್ರಿಕೋದ್ಯಮ ಎಂದರೆ ಕೇವಲ ಸರ್ಕಾರದ ಯೋಜನೆಗಳ ಪರಿಣಾಮದ ವರದಿಯಲ್ಲ. ಜನಸಮುದಾಯದಲ್ಲಿ ಬದಲಾವಣೆ ತಂದ ಸಂಗತಿಗಳು ಅಭಿವೃದ್ಧಿ ಪತ್ರಿಕೋದ್ಯಮದ ಭಾಗ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಡಾ. ಎಂ.ಟಿ. ಕುರಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅರುಣಕುಮಾರ ಹಬ್ಬು, ಬಿ.ಎಸ್. ಮಾಳವಾಡ ಇದ್ದರು.