ಮನೋವಿಕಾಸಕ್ಕೆ ಕ್ರೀಡೆ ಪ್ರೇರಕ: ಡಾ. ಅಜಿತ
ಧಾರವಾಡ: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದರಿಂದ ವಿದ್ಯಾರ್ಥಿಯು ಮನೋವಿಕಾಸ ಹಾಗೂ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಜೆಎಸ್ಸೆಸ್ ಶಿಕ್ಷಣ ಸಂಸ್ಥೆಯ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹೇಳಿದರು.
ಜೆಎಸ್ಸೆಸ್ ಶಿಕ್ಷಣ ಸಮಿತಿಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದ ಕರಾಟೆ ಪಟುಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಆತ್ಮರಕ್ಷಣೆಯ ಕಲೆ ಅತಿ ಮುಖ್ಯವಾಗಿದೆ. ಆತ್ಮರಕ್ಷಣೆ ಜತೆಯಲಿ ದೇಹಕ್ಕೆ ಕಸರತ್ತು ನೀಡುವ ಕರಾಟೆಗೆ ಪ್ರೋತ್ಸಾಹದ ಅಗತ್ಯವಿದೆ ಸದ್ಯ ಈ ಕಾಲೇಜಿನಲ್ಲಿ 3600 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ಕರಾಟೆ ತರಬೇತಿ ನೀಡುತ್ತಿದ್ದು, ವಿದ್ಯಾರ್ಥಿನಿಯರಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ. ಇಂದಿನ ಜಂಜಡದ ಜೀವನದ ಮಧ್ಯೆ ಈ ರೀತಿ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾನಸಿಕ ನೆಮ್ಮದಿ, ಒತ್ತಡ ರಹಿತ ವಿದ್ಯಾಭ್ಯಾಸ ಸಾದ್ಯ ಎಂದರು.
ಮೋಹನ ಮೋರೆ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪಾಲಕರ ಪ್ರೋತ್ಸಾಹದ ಅಗತ್ಯವಿದೆ. ಕ್ರೀಡೆಯಿಂದ ವಿದ್ಯಾಭ್ಯಾಸ ಕುಂಠಿತವಾಗುತ್ತದೆ ಎಂಬ ಭಾವನೆ ಸಲ್ಲದು. ಇಂದಿನ ಸ್ಪರ್ಧಾತ್ಮಕ, ತಾಂತ್ರಿಕ ಯುಗದಲ್ಲಿ ಕ್ರೀಡಾಪಟುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಭವಿಷ್ಯದ ದೃಷ್ಟಿಯಿಂದ ದುರದೃಷ್ಟಕರ ಎಂದರು. ಇಂಟರನ್ಯಾಶನಲ್ ಶೋಟೋಕಾನ್ ಕರಾಟೆ ಅಸೋಸಿಯೇಶನ್ನಿಂದ ಶ್ರೀಲಂಕಾದ ಪೆರಿಡಿನಿಯಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಷಿಪ್ನಲ್ಲಿ ಜೆಎಸ್ಸೆಸ್ನ ವಿದ್ಯಾರ್ಥಿಗಳು 3 ಪ್ರಥಮ, 2 ದ್ವಿತೀಯ ಹಾಗೂ 10 ರಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ರಜನಿದಾಸ್, ಐ.ಟಿ.ಐ. ಕಾಲೇಜಿನ ಪ್ರಚಾರ್ಯ ಮಹಾವೀರ ಉಪಾದ್ಯೆ, ಕ್ರೀಡಾ ನಿರ್ದೇಶಕ ಜಿನೇಂದ್ರ ಕುಂದಗೋಳ, ಕರಾಟೆ ತರಬೇತುದಾರ ರಮೇಶ ಸೊಲ್ಲಾಪುರೆ ಇದ್ದರು.