ಮಹಿಳಾ ರಕ್ಷಣೆಗೆ ನ್ಯಾಯಾಂಗ ಸುಧಾರಣೆಯಾಗಲಿ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 16
ಮಹಿಳೆಯ ಪ್ರಥಮ ಪ್ರಜೆಯಾಗಿ, ಪುರುಷನಿಗೆ ಸಮನಾಗಿ ಸ್ವತಂತ್ರವಾಗಿ ಬದುಕಲು ನ್ಯಾಯಾಂಗ ವ್ಯವಸ್ಥೆ ಸುಧಾರಿಸಬೇಕು. ಮಹಿಳೆಗೆ ರಕ್ಷಣೆ ನೀಡುವಂತ ಕಾನೂನುಗಳು ರಚನೆಯಾಗಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ. ಉಷಾ ಅಭಿಪ್ರಾಯಪಟ್ಟರು.
ಪ್ರಜ್ಞಾ ಮಹಿಳಾ ಮಂಡಳ ವತಿಯಿಂದ ನಡೆದ ರಂಗೋಲಿ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೇ ಇದ್ದು ಅವುಗಳು ಕೊನೆಯಾಗಬೇಕೆಂದು ಹೇಳಿದರು.
ಉಜ್ವಲಾ ಹಿರೇಮಠ ಮಾತನಾಡಿ, ಪ್ರತಿಯೊಬ್ಬ ಮಹಿಳೆ ಸ್ವಾಭಿಮಾನದಿಂದ ಬದುಕುವುದರೊಂದಿಗೆ ತನ್ನ ಮೇಲಿನ ದೌರ್ಜನ್ಯವನ್ನು ತಡೆಯುವುದಕ್ಕೆ ತಾನೇ ಮುಂದಾಗಬೇಕು ಸಂಸಾರದ ಜವಾಬ್ದಾರಿ ಜೊತೆಗೆ ರಾಷ್ಟ್ರ ಕುರಿತು ಚಿಂತನೆ ಮಾಡುವ ಶಕ್ತಿ ಮಹಿಳೆಗಿದೆ. ಆ ನಿಟ್ಟಿನಲ್ಲಿ ಮಹಿಳೆ ವಿಚಾರ ಮಾಡಿ ಸಮಾಜಮುಖಿಯಾಗಬೇಕು ಎಂದರು.
ನ್ಯಾಯವಾದಿ ಪ್ರಫುಲ್ಲಾ ನಾಯಕ, ದೌರ್ಜನ್ಯಕ್ಕೆ ಒಳಗಾಗುವ, ಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡಬೇಕು ಅಂದಾಗ ಮಹಿಳೆಯರ ಸಬಲೀಕರಣ ಸಾಧ್ಯ ಎಂದು ಹೇಳಿದರು.
ನಿರ್ಣಾಯಕರಾಗಿ ನ್ಯಾಯವಾದಿ ವಿ.ಜಿ. ಭಟ್, ಡಾ. ಸೌಭಾಗ್ಯ ಕುಲಕರ್ಣಿ ಉಪಸ್ಥಿತರಿದ್ದರು. ಆರತಿ ಪಾಟೀಲ, ನಿರ್ಮಲಾ ಸಾರಂಗಮಠ, ಸಂಘದ ಗೌರವಾಧ್ಯಕ್ಷೆ ಮಲ್ಲಮ್ಮ ಪಾಟೀಲ, ಮಂಜುಳಾ ಮಡಿವಾಳರ, ಭಾಗ್ಯಶ್ರೀ ಮರಲಿಂಗಪ್ಪನವರ, ಜ್ಯೋತಿ ಶೆಟ್ಟಿ, ರಾಧಾ ಪೂಜಾರ, ಲಕ್ಷ್ಮೀ ಹಳ್ಳಿಕೇರಿ, ಸುಜಾತಾ ರಾಯ್ಕರ ಇದ್ದರು.