ಮುಖ್ಯಾಧ್ಯಾಪಕರ ನಿರ್ಲಕ್ಷ್ಯ: ವೇತನವಿಲ್ಲದ ಶಿಕ್ಷಕರು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 18
ದೇವರು ವರ ಕೊಟ್ಟರೂ, ಪೂಜಾರಿ ಕೊಡಲಿಲ್ಲ...! ಎಂಬಂತೆ ನಗರದ ನಾಗಶೆಟ್ಟಿಕೊಪ್ಪದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಿಗೆ ಕೇಂದ್ರ ಸರ್ಕಾರ ವೇತನ ಬಿಡುಗಡೆ ಮಾಡಿದ್ದರೂ ಪ್ರೌಢಶಾಲೆ ಮುಖ್ಯಾಧ್ಯಾಪಕರು ವೇತನ ಬಿಡುಗಡೆ ಮಾಡದೇ ಅಂತಂತ್ರ ಸ್ಥಿತಿಯಲ್ಲಿರಿಸಿದ್ದಾರೆ.
ಕಳೆದ 10 ತಿಂಗಳಿಂದ ಪ್ರೌಢಶಾಲೆಯ ಹತ್ತು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತ ಬಂದಿದ್ದರೂ ಅವರಿಗೆ ಇಲ್ಲಿಯವರೆಗೆ ವೇತನ ನೀಡಿಲ್ಲ. ಇದಕ್ಕೆ ಕಾರಣ, ಶಾಲೆಯ ಮುಖ್ಯಾಧ್ಯಾಪಕರ ಬೇಜವಾಬ್ದಾರಿತನ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾರೆ.
ಕೇಂದ್ರದ ಅನುದಾನ: ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಯೋಜನೆಯಡಿ ನಾಗಶೆಟ್ಟಿಕೊಪ್ಪ ಶಾಲೆಗೆ ವರ್ಷದ ಹಿಂದೆ 10 ಶಿಕ್ಷಕರು ನೇಮಕಗೊಂಡಿದ್ದರು. ಕೇಂದ್ರ ಸರ್ಕಾರ, ನೇಮಕಗೊಂಡ ಎಲ್ಲ ಶಿಕ್ಷಕರಿಗೂ ಪ್ರತಿ ತಿಂಗಳು ವೇತನ ಬಿಡುಗಡೆ ಮಾಡಿದೆ.
ಆದರೆ, ವೇತನಾನುದಾನ ಆಯಾ ಶಿಕ್ಷಕರಿಗೆ ತಲುಪಿಸಸಬೇಕಿದ್ದ ಶಾಲೆಯ ಮುಖ್ಯೋಪಾಧ್ಯಾಯರು ಬೇಜವಾಬ್ದಾರಿಯಿಂದಾಗಿ ಸರ್ಕಾರಿ ನೌಕರಿ ಇದ್ದರೂ ವೇತನವಿಲ್ಲದಂತಹ ಪರಿಸ್ಥಿತಿಯಲ್ಲಿ ಶಿಕ್ಷಕರು ಬದುಕುತ್ತಿದ್ದಾರೆ.
ಹಾರಿಕೆ ಉತ್ತರ: ಪ್ರತಿ ತಿಂಗಳು ವೇತನಕ್ಕೆ ಆರ್‌ಎಂಎಸ್‌ಎ ಯೋಜನೆ ಅಡಿಯಲ್ಲಿ ನೇಮಕಗೊಂಡಿರುವ ಶಿಕ್ಷಕರು, ಮುಖ್ಯೋಪಾಧ್ಯಾಯರ ಎದುರು ಕೈಕಟ್ಟಿ ನಿಂತರು ಕ್ಯಾರೇ ಎನ್ನದ ಅವರು, ಪ್ರತಿಬಾರಿ ಕಾರಣಗಳನ್ನು ನೀಡಿ ಶಿಕ್ಷಕರನ್ನು ಸಾಗ ಹಾಕುತ್ತಿದ್ದರು ಎಂದು ಗೊತ್ತಾಗಿದೆ.
ಅಲ್ಲದೆ, ಈ ವಿಷಯ ಮಾಧ್ಯಮಗಳಿಗೆ ತಿಳಿಸದಂತೆ ಕೆಲ ಕಾಣದ ಕೈಗಳು ಶಿಕ್ಷಕರನ್ನು ಬೆದರಿಸಿದ್ದವು ಎಂಬ ಮಾತುಗಳು ಕೇಳಿ ಬಂದಿವೆ. ಹೊಸದಾಗಿ ಆಯ್ಕೆಗೊಂಡಿರುವ ಮುಗ್ಧ ಶಿಕ್ಷಕರು, ಸಂಬಳ ಆಗದೆ ಇರುವ ವಿಷಯವನ್ನು 10 ತಿಂಗಳಿಂದ ಗೌಪ್ಯವಾಗಿಯೇ ಇಟ್ಟುಕೊಂಡು ಬಂದಿದ್ದರು.
ವಾಪಸಾಗುವ ಸಾಧ್ಯತೆ: ಆರ್‌ಎಂಎಸ್‌ಎ ಯೋಜನೆ ಅಡಿಯಲ್ಲಿ ನೇಮಕಗೊಂಡ ಶಿಕ್ಷಕರಿಗೆ ಕೇಂದ್ರ ಸರ್ಕಾರ ಕಾಲ ಕಾಲಕ್ಕೆ ಬಿಡುಗಡೆ ಮಾಡುವ ವೇತನಾನುದಾನ ಇದೇ ತಿಂಗಳು ಮಾರ್ಚ್ 31ರೊಳಗಾಗಿ ಆಯಾ ಶಿಕ್ಷಕರಿಗೆ ತಲುಪದಿದ್ದಲ್ಲಿ ಆ ಅನುದಾನ ಮತ್ತೆ ಕೇಂದ್ರ ಸರ್ಕಾರಕ್ಕೆ ಮರಳುವ ಸಾಧ್ಯತೆ ಇದೆ.
ಅಕಸ್ಮಾತ್ ವೇತನಾನುದಾನ ಕೇಂದ್ರ ಸರ್ಕಾರಕ್ಕೆ ವಾಪಸ್ಸು ಹೋದಲ್ಲಿ ಶಿಕ್ಷಕರು ಹಿಂದಿನ ವರ್ಷದ ವೇತನಕ್ಕಾಗಿ ಇನ್ನೂ ಒಂದು ವರ್ಷ ಕಾಯಬೇಕಾಗುತ್ತದೆ. ಸಂಬಳಕ್ಕಾಗಿ ಬಿಡುಗಡೆಯಾಗಿರುವ ಅನುದಾನ ಈವರೆಗೂ ಯಾವ ಕಾರಣಕ್ಕೆ ಉಪಯೋಗಿಸಿಕೊಂಡಿಲ್ಲ ಎನ್ನುವುದಕ್ಕೆ ಶಾಲಾ ಮುಖ್ಯಾಧ್ಯಾಪಕರು ಸ್ಪಷ್ಟನೆ ನೀಡಬೇಕಿದೆ.
ಶಾಲೆಯ ಮುಖ್ಯಸ್ಥರು ನೀಡುವ ವಿವರಣೆಯನ್ನು ಆಲಿಸಿ ಹಿರಿಯ ಅಧಿಕಾರಿಗಳು ಸಂಬಳ ಬಿಡುಗಡೆ ಮಾಡುತ್ತಾರೆ. ಇಷ್ಟೆಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಪಕ್ಷ 10-15 ದಿನಗಳಾದರೂ ಬೇಕಾಗುತ್ತದೆ. ಈ ಹೊತ್ತಿಗೆ ಮಾರ್ಚ್ 31 ಕೊನೆಗೊಂಡರೆ ಸಂಬಳಕ್ಕಾಗಿ ಬಿಡುಗಡೆಯಾಗಿರುವ ಅನುದಾನ ಮತ್ತೆ ಕೇಂದ್ರ ಸರ್ಕಾರಕ್ಕೆ ವಾಪಸ್ಸು ಹೋಗಲಿದೆ ಎಂಬ ಸಂಗತಿ ಶಿಕ್ಷಕರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.
ಬೇರೆಲ್ಲೂ ಆಗಿಲ್ಲ: ಕಳೆದ ವರ್ಷವೇ ಆರ್‌ಎಂಎಸ್‌ಎ ಯೋಜನೆ ಅಡಿಯಲ್ಲಿ ಜಿಲ್ಲೆಯಾದ್ಯಂತ ಸಾಕಷ್ಟು ಶಿಕ್ಷಕರು ನೇಮಕಗೊಂಡಿದ್ದಾರೆ. ಜಿಲ್ಲೆಯ ಇತರೆಡೆ ನೇಮಕಗೊಂಡ ಶಿಕ್ಷಕರಿಗೆ ಎರಡನೇ ತಿಂಗಳಿನಿಂದ ವೇತನ ಪಡೆಯುವುದಕ್ಕೆ ಆರಂಭಿಸಿದ ಉದಾಹರಣೆಗಳಿವೆ.
ಆದರೆ, ನಾಗಶೆಟ್ಟಿಕೊಪ್ಪದ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಿಗೆ ಮಾತ್ರ ಹತ್ತು ತಿಂಗಳಿಂದ ವೇತನ ಪಾವತಿಯಾಗದಿರುವುದರ ಹಿಂದೆ ಷಡ್ಯಂತ್ರವಿದೆ ಎಂದು ಹೇಳಲಾಗುತ್ತಿದೆ.
ಆಶ್ಚರ್ಯ!: ಕೇಂದ್ರ ಸರ್ಕಾರದ ಯೋಜನೆಯಡಿ ನೇಮಕಗೊಂಡಿದ್ದ 10 ಶಿಕ್ಷಕರಿಗೆ 10 ತಿಂಗಳಿಂದ ಸಂಬಳ ಸಂದಾಯವಾಗಿಲ್ಲ ಎಂಬ ಸಂಗತಿ ಈ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಟಿ.ಕೆ. ಚಿಕ್ಕಮಠ ಅವರ ಗಮನಕ್ಕೆ ಬಂದದ್ದು ಮೊನ್ನೆಯಷ್ಟೇ ಎಂಬುದು ಆಶ್ಚರ್ಯಕ್ಕೆ ಹುಟ್ಟಿಸಿದೆ.
ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ, ಈ ಯೋಜನೆಯಡಿ ನೇಮಕಗೊಂಡ ಶಿಕ್ಷಕರಿಗೆ ಕೇಂದ್ರ ಸರ್ಕಾರ ಆಯಾ ತಿಂಗಳಿನಿಂದಲೇ ಸಂಬಳ ಬಿಡುಗಡೆ ಮಾಡಿದೆ. ಆದಾಗ್ಯೂ, ಹಣ ಮಾತ್ರ ಶಿಕ್ಷಕರ ಕೈ ಸೇರದಂತೆ ಮುಖ್ಯೋಪಾಧ್ಯಾಯರು ಕೆಲಸ ಮಾಡಿದ್ದಾರೆ.
- ಬಿ.ಕೆ. ಮಹೇಂದ್ರ