ಆಪ್ಗೆ ನೇರ ಸ್ಪರ್ಧಿ ಬಿಜೆಪಿ: ಹೇಮಂತಕುಮಾರ್
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 20
ಧಾರವಾಡ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ನೇರ ಸ್ಪರ್ಧಿ ಬಿಜೆಪಿಯ ಪ್ರಹ್ಲಾದ ಜೋಶಿ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹೇಮಂತ ಕುಮಾರ ಹೇಳಿದ್ದಾರೆ.
ನಗರದ ಯು.ಬಿ. ಹಿಲ್ ಬಳಿಯ ಪಕ್ಷದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪಕ್ಷದ ಸಭೆಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪ್ ಪ್ರಣಾಳಿಕೆಗಳ ಜತೆಗೆ ಬಿಜೆಪಿಯ ಹಾಗೂ ಜೋಶಿ ಅವರ ಕೊರತೆಗಳನ್ನು ಎತ್ತಿ ಹಿಡಿದು ಚುನಾವಣೆ ಎದುರಿಸುವುದಾಗಿ ಹೇಳಿದರು. ಚಳವಳಿಯ ಗರ್ಭದಿಂದ ಹುಟ್ಟಿದ ಆಪ್, ಸಮಾಜದಲ್ಲಿ ಜಾತ್ಯತೀತ ಸಂಸ್ಕೃತಿ ಹುಟ್ಟುಹಾಕಲಿದೆ. ಹೀಗಾಗಿ, ದೆಹಲಿಯಲ್ಲಿ ಜನರು ಪಕ್ಷ ಬೆಂಬಲಿಸಿದ್ದು, ಧಾರವಾಡ ಕ್ಷೇತ್ರದಲ್ಲೂ ಬೆಂಬಲಿಸಬೇಕು ಎಂದು ಮನವಿ ಮಾಡಿದ ಹೇಮಂತಕುಮಾರ, ಪಕ್ಷದ ಪ್ರಣಾಳಿಕೆಗಳನ್ನು ವಿವರಿಸಿದರು.
ಪ್ರಣಾಳಿಕೆಯಲ್ಲೇನಿದೆ?: ಚುನಾವಣೆಯಲ್ಲಿ ಗೆಲ್ಲಲಿ, ಸೋಲಲಿ ಈ ಪ್ರಣಾಳಿಕೆಯ ಅಂಶಗಳನ್ನು ಜಾರಿಗೆ ತರುವುದಕ್ಕೆ ಹಿಂದೇಟು ಹಾಕುವುದಿಲ್ಲ. ಉತ್ತರ ಕರ್ನಾಟಕವನ್ನು ಎಲ್ಲ ರೀತಿಯಿಂದ ಕಡೆಗಣಿಸಲಾಗಿದೆ. ಹೆಚ್ಚಿನ ಅನುದಾನ ದಕ್ಷಿಣ ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರು ಹಾಗೂ ಮೈಸೂರಿಗೆ ಹೋಗುತ್ತಿದೆ. ಇದು ಖಂಡನೀಯ. ಹುಬ್ಬಳ್ಳಿ-ಧಾರವಾಡ ಮಧ್ಯೆ ಹಾಗೂ ಶಿಗ್ಗಾಂವಿಯಿಂದ ಚೆನ್ನಮ್ಮ ಕಿತ್ತೂರು ವರೆಗೂ ಮೆಟ್ರೋ ರೈಲು ಯೋಜನೆಗೆ ಪ್ರಯತ್ನ ಮಾಡುತ್ತೇವೆ. ಕ್ಷೇತ್ರದ ಎಲ್ಲ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ವ್ಯವಸ್ಥೆ, ರಸ್ತೆ, ಗುಣಮಟ್ಟದ ಶಿಕ್ಷಣ, ಆಸ್ಪತ್ರೆ, ವ್ಯಾಪಾರಿ ಮಳಿಗೆ ಹಾಗೂ ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುವುದು ಎಂದರು. ಮಲಪ್ರಭಾ ಮತ್ತು ಘಟಪ್ರಭಾ ನೀರಾವರಿ ಯೋಜನೆಗಳನ್ನು ಹಾಳುಮಾಡಿ, ಭ್ರಷ್ಟಾಚಾರದ ಸರಪಳಿ ಸುತ್ತಲಾಗಿದೆ. ರೈತರ ಆಶೋತ್ತರಗಳಿಗೆ ತಕ್ಕಂತೆ ಅವುಗಳನ್ನು ಮರು ಅಭಿವೃದ್ಧಿ ಪಡಿಸುತ್ತೇವೆ. ಕ್ಷೇತ್ರದ ಸುಶಿಕ್ಷಿತ ಯುವ ಜನಾಂಗದ ಕಾರ್ಯ ಪರಿಣಿತಿ ಉತ್ತಮಗೊಳಿಸಿ, ಉದ್ಯೋಗ ದೊರಕಿಸುವ ಪ್ರಯತ್ನ, ವಿಷಮುಕ್ತ ಹಾಗೂ ಸಂಪೂರ್ಣ ಸಾವಯವ ಜಿಲ್ಲೆಯಾಗಿಸಲು ಪ್ರಯತ್ನ ಮಾಡಲಾಗುವುದು ಎಂದು ಹೇಮಂತಕುಮಾರ್ ಹೇಳಿದರು. ನಾಮಪತ್ರ ಸಲ್ಲಿಕೆ ಬಳಿಕ ಎರಡು ಹಂತದಲ್ಲಿ ಪ್ರಚಾರ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಶಿಗ್ಗಾಂವಿಯಿಂದ ಚೆನ್ನಮ್ಮನ ಕಿತ್ತೂರು ವರೆಗೆ ನಾಲ್ಕು ವಿಧಾನಸಭೆ ಕ್ಷೇತ್ರದಲ್ಲಿ 150 ಕಿ.ಮೀ. ಹಾಗೂ 2ನೇ ಹಂತದಲ್ಲಿ ಕಲಘಟಗಿಯಿಂದ ನವಲಗುಂದ ವರೆಗೆ ನಾಲ್ಕು ವಿಧಾನಸಭೆ ಕ್ಷೇತ್ರದಲ್ಲಿ 150 ಕಿ.ಮೀ. ಪ್ರಚಾರ ಹಾಗೂ ಜಾಥಾ ನಡೆಸಲಾಗುವುದು. ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ ಪಕ್ಷವನ್ನು ಬೆಂಬಲಿಸಿ ಪ್ರಚಾರ ಮಾಡುವುದಾಗಿ ಭರವಸೆ ನೀಡಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಅವಳಿ ನಗರಕ್ಕೆ ಬರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಪಕ್ಷದ ಮುಖಂಡರಾದ ಬಸವರಾಜ ಮುದಿಗೌಡರ, ಅವಿನಾಶ ಸದಾನಂದ, ಬಿ.ಎಸ್. ಚಿನಗುಂಡಿ, ಅರುಣ ಕುಮಾರ, ಕಾನೂನು ಸಲಹೆಗಾರ ಜಾವೇದ ಹಾಜರಿದ್ದರು.