ಏಪ್ರಿಲ್ನಲ್ಲಿ ನರೇಂದ್ರ ಮೋದಿ ರಾಜ್ಯ ಪ್ರವಾಸ: ಜೋಶಿ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 20
ಯುಗಾದಿ ಬಳಿಕ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ರಾಜ್ಯದಲ್ಲಿ ಮತ್ತೊಮ್ಮೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಧಾರವಾಡ ಲೋಕಸಭಾ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು.
ನಗರದ ವಿವಿಧ ಮೈದಾನ ಹಾಗೂ ಉದ್ಯಾನವನಗಳಲ್ಲಿ ಗುರುವಾರ ಬೆಳಗಿನ ಜಾವ ವಾಯುವಿಹಾರಿಗಳಲ್ಲಿ ಮತಯಾಚಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯ ಪ್ರವಾಸಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೋದಿ ಅವರೊಂದಿಗೆ ಮಾತುಕತೆ ಮಾಡಲಾಗಿದ್ದು, ಏಪ್ರಿಲ್ ಮೊದಲನೇ ವಾರದಲ್ಲಿ ಪ್ರವಾಸ ಕೈಗೊಳ್ಳುವ ಸಂಭವವಿದೆ ಎಂದರು. ಸಮೃದ್ಧ ರಾಷ್ಟ್ರ ನಿರ್ಮಾಣದ ಕನಸುಗಳನ್ನು ಹೊತ್ತಿರುವ ಮೋದಿ ಅವರ ಅಲೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಬಾರಿ ಎನ್ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸ್ಪರ್ಧೆಗೆ ಸಂಬಂಧಿಸಿದಂತೆ ಉತ್ತರಿಸಿದ ಅವರು ಕಾಂಗ್ರೆಸ್ ಸಹ ನನ್ನ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮೀನಮೇಷ ಎನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮುತಾಲಿಕ ಅಥವಾ ಉಳಿದವರು ಲೆಕ್ಕಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಳೆದ 10 ತಿಂಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದ್ದು, ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ದೊರೆತಿಲ್ಲ. ಇದು ಕಾಂಗ್ರೆಸ್ ಸರ್ಕಾರ ಕಾರ್ಯವೈಖರಿ. ಇದನ್ನು ಗಮನಿಸಿದಾಗ ಸರ್ಕಾರ ಇನ್ನೂ ಟೇಕ್ ಆಫ್ ಕೂಡ ಆಗಿಲ್ಲ. ಈ ಆಡಳಿತ ಕ್ರಮದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಪರ ಅಲೆ ಬೀಸಿದೆ. ಮಾ. 24ರಂದು ನಾಮಪತ್ರ ಸಲ್ಲಿಸಲಿದ್ದು, ಈಗಾಗಲೇ ಬಿರುಸಿನ ಪ್ರಚಾರ ನಡೆಯುತ್ತಿದೆ ಎಂದರು. ಬೆಳಗ್ಗೆ 6ಕ್ಕೆ ಧಾರವಾಡಕ್ಕೆ ಆಗಮಿಸಿದ ಪ್ರಹ್ಲಾದ ಜೋಶಿ ನಗರದ ಜಯನಗರ ಕೆರೆ, ಕೆಸಿಡಿ ಮೈದಾನದಲ್ಲಿ ವಾಯುವಿಹಾರಿಗಳೊಂದಿಗೆ ವಾಕಿಂಗ್ ಮಾಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಮೇಯರ್ ಶಿವು ಹಿರೇಮಠ, ಶಶಿಮೌಳಿ ಕುಲಕರ್ಣಿ, ಅರವಿಂದ ಏಗನಗೌಡರ ಇದ್ದರು.