ಎಸ್ಸೆಸ್ಸೆಲ್ಸಿ ಉರ್ದು ಪರೀಕ್ಷೆ: ಭರ್ಜರಿ ನಕಲು
ಹುಬ್ಬಳ್ಳಿ: ಪಟ್ಟಾಗಿ ಕುಳಿತು ನಕಲು ಮಾಡಿದರೂ ಪರೀಕ್ಷಾ ಮೇಲ್ವಿಚಾರಕ ಏನು, ಏಕೆ ಎಂದು ಕೇಳಲಿಲ್ಲ. ಇದು ನಡೆದದ್ದು ಶುಕ್ರವಾರದಿಂದ ಆರಂಭವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ.
ಶುಕ್ರವಾರ ರಾಜ್ಯಾದ್ಯಂತ ಆಯಾ ಮಾಧ್ಯಮದ ಪ್ರಥಮ ಭಾಷೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಹುಬ್ಬಳ್ಳಿಯ ಕೌಲಪೇಟೆಯಲ್ಲಿರುವ ಆಂಗ್ಲೋ ಉರ್ದು ಬಾಲಕಿಯರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಭರ್ಜರಿ ನಕಲು ನಡೆದಿದೆ. ಉರ್ದುವನ್ನು ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿನಿಯೊಬ್ಬಳು ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಉಪಸ್ಥಿತಿಯಲ್ಲೇ ಕಾಪಿ ಚೀಟಿಗಳನ್ನು ಮೇಜಿನ ಮೇಲಿಟ್ಟುಕೊಂಡು, ರಾಜಾರೋಷವಾಗಿ ಪ್ರಶ್ನೆಗಳಿಗೆ ಉತ್ತರಿಸಿದ್ದಾಳೆ. ಸುದ್ದಿ ತಿಳಿದು ಮಾಧ್ಯಮಗಳ ಛಾಯಾಗ್ರಾಹಕರು ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪರೀಕ್ಷಾ ಉಸ್ತುವಾರಿ ಸಿಬ್ಬಂದಿ ನಕಲು ಮಾಡುವುದಕ್ಕೆ ವಿದ್ಯಾರ್ಥಿಗಳು ತಂದಿದ್ದ ಚೀಟಿಗಳನ್ನು ತಪಾಸಣೆ ಮಾಡಿ ವಶಪಡಿಸಿಕೊಂಡಿದ್ದಾರೆ.