ಮುತಾಲಿಕ್ ಸೇರ್ಪಡೆ ಮುಗಿದ ಅಧ್ಯಾಯ: ಈಶ್ವರಪ್ಪ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 28
ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಬಿಜೆಪಿ ಸೇರ್ಪಡೆ ವಿಚಾರ ಮುಗಿದ ಅಧ್ಯಾಯ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮುತಾಲಿಕ್ ಸೇರ್ಪಡೆ ವಿಚಾರ ಪದೇ ಪದೆ ಮಾತನಾಡುವುದರಲ್ಲಿ ಅರ್ಥವಿಲ್ಲ.
ಲೋಕಸಭೆ ಚುನಾವಣೆಯಲ್ಲಿ ಮುತಾಲಿಕ್ ಸ್ಪರ್ಧಿಸುವುದರಿಂದ ಬಿಜೆಪಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದ ಅವರು ಸ್ಪರ್ಧಿಸುವುದು ಬಿಡುವುದು ಮುತಾಲಿಕ್ ಅವರಿಗೆ ಸಂಬಂಧಿಸಿದ್ದು ಎಂದರು.
ಮತದಾರನ ನಂಬಿಕೆ, ವಿಶ್ವಾಸ, ಆಶೀರ್ವಾದ ಹೊಂದಿರುವ ಧಾರವಾಡ ಲೋಕಸಭೆ ಅಭ್ಯರ್ಥಿಯೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಭಾರಿ ಅಂತರದಿಂದ ಜಯಭೇರಿ ಬಾರಿಸುವುದು ನಿಸ್ಸಂಶಯ. ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ನರಹಂತಕ ಎಂದು ಕರೆಯುವುದು ಸರಿಯಲ್ಲ. ಸರ್ವೋಚ್ಚ ನ್ಯಾಯಾಲಯವೇ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಟೀಕಿಸುವವರು ಮರೆಯಬಾರದೆಂದರು.
ಮೋದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವ ಮೊದಲು ಮಾತಿನ ಮೇಲೆ ಹಿಡಿತವಿಟ್ಟುಕೊಳ್ಳಲಿ ಎಂದು ಸಲಹೆ ನೀಡಿದ ಅವರು, ದೇಶದೆಲ್ಲೆಡ ಮೋದಿ ಅಲೆ ಇದ್ದು ಈ ಬಾರಿ ಬಿಜೆಪಿ ಭಾರಿ ಬಹುಮತದೊಂದಿಗೆ ಕೇಂದ್ರದ ಚುಕ್ಕಾಣಿ ಹಿಡಿಯುವುದು ಶತಸ್ಸಿದ್ಧ ಎಂದೂ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.