ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸ್ವಾರ್ಥ ರಾಜಕಾರಣಕ್ಕೆ ಜಾತಿ ಬಳಕೆ

Mainashree
Updated On : 29 Mar 2014, 9:59 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 28
ರಾಜಕಾರಣದಲ್ಲಿಂದು ಒಂದು ಜಾತಿ ವಿರುದ್ಧ ಮತ್ತೊಂದು ಜಾತಿಯನ್ನು ಎತ್ತಿಕಟ್ಟುವ ಮೂಲಕ ಸ್ವಾರ್ಥ ಸಾಧಿಸುವ ಕಾರ್ಯ ನಡೆದಿದೆ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ವಿಷಾದ ವ್ಯಕ್ತಪಡಿಸಿದರು.
ಶುಕ್ರವಾರ ಆರ್. ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತೀಯ ಜನತಾ ಪಾರ್ಟಿ ಧಾರವಾಡ ಲೋಕಸಭೆ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯಾ ಜಾತಿಗಳಿಗೆ ಸರ್ಕಾರ ನೀಡಿರುವ ಸೌಲಭ್ಯಗಳು ಎಲ್ಲರಿಗೂ ತಲುಪದೆ ಮಧ್ಯವರ್ತಿಗಳ ಪಾಲಾಗಿ ಕೆಲವೇ ಕೆಲವು ಜನರಿಗೆ ಮಾತ್ರ ಲಭಿಸುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರೇ ಹಿಂದುಳಿದ ವರ್ಗಗಳನ್ನು ತುಳಿಯುವ ಕೆಲಸ ನಡೆದಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ ಎಂದರು.
ದಿ. ದೇವರಾಜ ಅರಸು ನಿಗಮ, ಅಂಬೇಡ್ಕರ್ ನಿಗಮ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಅನುದಾನ ನೀಡಲಾಗಿತ್ತು. ಅಲ್ಲದೆ, ಹಿಂದುಳಿದ ವರ್ಗಗಳ ಸಚಿವಾಲಯ ಸ್ಥಾಪಿಸಿದ ಕೀರ್ತಿಯೂ ಬಿಜೆಪಿಗೆ ಸಲ್ಲುತ್ತದೆ.
ದಲಿತ, ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನೀಡಲಾಗುತ್ತಿದ್ದ ರು. 350 ಶಿಷ್ಯವೇತನ ರು. 850ಕ್ಕೆ ಏರಿಸಲಾಗಿದೆ. ಕನಕದಾಸ ಜಯಂತಿ, ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಘೋಷಣೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ರು. 175 ಕೋಟಿ ಅನುದಾನ ನೀಡಲಾಗಿದೆ. ಇದಲ್ಲದೆ, ಹಿಂದುಳಿದ ವರ್ಗಗಳ 33 ಜಾತಿಗಳ ಸ್ವಾಮೀಜಿಗಳ ವಿವಿಧ ಬೇಡಿಕೆಗಳನ್ನು ಏಕಕಾಲದಲ್ಲಿ ಪೂರೈಸಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಜನರೆಲ್ಲರೂ ಬೇಡಿಕೆಗಳ ಈಡೇರಿಕೆಗಾಗಿ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಜಾತಿ ಎಂಬ ಸಂಕುಚಿತ ಭಾವನೆ ಕಳಚಿ ಹಾಕಿ ಹಿಂದುಳಿದವರ ಉದ್ಧಾರಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಪ್ರಹ್ಲಾದ ಜೋಶಿ ಅವರಿಗೆ ಪ್ರಸಕ್ತ ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ಆಯ್ಕೆ ಮಾಡಲು ಪ್ರತಿಯೊಬ್ಬರು ಸಂಕಲ್ಪಗೈಯಬೇಕೆಂದರು.
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ಕಾಂಗ್ರೆಸ್ ಸರ್ಕಾರ ಅಹಿಂದ ಜಪ ಮಾಡುತ್ತಿದೆ ವಿನಃ ಹಿಂದುಳಿದ ಪರವಾಗಿ ಯಾವುದೊಂದು ಕಾರ್ಯಕ್ರಮ ಜಾರಿಗೆ ತಂದಿಲ್ಲ. ಸರ್ಕಾರ 11 ತಿಂಗಳು ಪೂರೈಸಿದರೂ ಯಾವುದೇ ಯೋಜನೆಗಳಿಗೆ ಅನುಮೋದನೆ ನೀಡಿಲ್ಲ ಎಂದು ದೂರಿದರು.
ಮೋದಿ ಅಲೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿಗರು ಪ್ರತಿಯೊಂದು ವೇದಿಕೆಯಲ್ಲಿಯೂ ಮೋದಿ ಅಲೆ ಇಲ್ಲವೇ ಇಲ್ಲ ಎಂದು ಸಮರ್ಥನೆ ನೀಡುತ್ತಿರುವ ಹಿಂದೆ ಅವರಲ್ಲಿ ಮೋದಿಯವರ ಬಗ್ಗೆ ಇರುವ ಭಯ ತೋರುತ್ತದೆ.
ಕೇಂದ್ರ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದಿಂದ ದೇಶ ಆರ್ಥಿಕ ದಿವಾಳಿಗೆ ತಳ್ಳಲ್ಪಟ್ಟಿದೆ. ವಿದೇಶದಲ್ಲಿರುವ ಕಪ್ಪು ಹಣ ವಾಪಸ್ಸು ತರುವಲ್ಲಿ ಕೇಂದ್ರ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದ ಜೋಶಿ, ಮೋದಿಯನ್ನು ಪ್ರಧಾನಿಯಾಗಿಸಲು ತಮ್ಮನ್ನು ಗೆಲ್ಲಿಸಬೇಕೆಂದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾ. ನಾಗರಾಜ, ಶಾಸಕ ಸೋಮಣ್ಣ ಬೇವಿನಮರದ, ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ನಾರಾಯಣ ತಾತುಸ್ಕರ್, ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಮಹೇಶ ಟೆಂಗಿನಕಾಯಿ, ರಂಗಾ ಬದ್ದಿ, ಸತೀಶ ಶೇಜವಾಡಕರ ಸೇರಿದಂತೆ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement