ಜಾತ್ರೆಗೂ ಚುನಾವಣೆ ಖದರ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 28
ಇದೀಗ ಜಾತ್ರೆಗಳಿಗೂ ಚುನಾವಣೆಯ ಖದರ್ ಬಂದುಬಿಟ್ಟಿದೆ...!
ಈ ಭಾಗದ ಜಾತ್ರೆಗಳಿಗೆ ವಿವಿಧ ಪಕ್ಷದ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಲಗ್ಗೆಯಿಟ್ಟಿದ್ದಾರೆ. ಇದೇನಿದು, ಚುನಾವಣಾ ಪ್ರಚಾರ ಕೈಬಿಟ್ಟು ಜಾತ್ರೆಯಲ್ಲೇನು ಮಾಡುತ್ತಿದ್ದಾರೆ ಎಂದು ಭಾವಿಸಿದಿರಾ? ಇಲ್ಲೇ ಇರುವುದು ಗುಟ್ಟು. ಸ್ವಾಮಿ ಕಾರ್ಯವೂ ಆಯಿತು, ಸ್ವಕಾರ್ಯವೂ ಆಯಿತು ಎಂದು ಜಾತ್ರೆಗೆ ಹೋಗಿ ಗುಟ್ಟಾಗಿ ಮತ ಯಾಚನೆ ಮಾಡುತ್ತಿದ್ದಾರೆ.
ಚುನಾವಣಾ ಆಯೋಗ ಅದೆಷ್ಟೇ ಹದ್ದಿನ ಕಣ್ಣಿಟ್ಟರೂ ರಾಜಕಾರಣಿಗಳು ಮಾತ್ರ ಮದುವೆ, ಮುಂಜಿಗಳಷ್ಟೇ ಅಲ್ಲ, ವಿವಿಧ ಮಠ, ದೇವಸ್ಥಾನಗಳಲ್ಲಿ ನಡೆಯುತ್ತಿರುವ ಜಾತ್ರೆಗಳನ್ನೂ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಮದುವೆ, ಮುಂಜಿ, ಜಾತ್ರೆಗಳ ಸೀಸನ್‌ನಲ್ಲೇ ಚುನಾವಣೆ ಎದುರಾಗಿರುವುದು ಅಭ್ಯರ್ಥಿಗಳಿಗೆ ವರವೂ ಆಗಿದೆ. ಉರಿ ಬಿಸಿಲಿನಲ್ಲಿ ಮನೆ ಮನೆ ಸುತ್ತುವುದು ಕಷ್ಟ. ಹೀಗಾಗಿ, ಇಂತಹ ಸಮಾರಂಭಗಳನ್ನೇ ಬಹುತೇಕ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಅಭ್ಯರ್ಥಿಗಳು ಹಾಜರಾಗುವ ಮದುವೆ, ಮುಂಜಿಗಳಿಗೂ ಸದ್ದು ಗದ್ದಲವಿಲ್ಲದೆ ಚುನಾವಣಾ ಆಯೋಗದ ಅಧಿಕಾರಿಗಳು ನುಗ್ಗುತ್ತಿರುವುದರಿಂದ ಸಮಾರಂಭದಲ್ಲಿ ಖದರ್ ಜಮಾಯಿಸಿ ಮತ ಯಾಚಿಸುವುದು ಅಭ್ಯರ್ಥಿಗಳ ಪಾಲಿಗೆ ಕಷ್ಟವಾಗಿದೆ. ಇವುಗಳಿಗೆ ಹೋಲಿಸಿದರೆ ಜಾತ್ರೆಗಳೇ ಸೇಫ್ ಎಂದು ಅಭ್ಯರ್ಥಿಗಳು, ಕಾರ್ಯಕರ್ತರು ಭಾವಿಸಿ, ಮತ ಗಳಿಕೆಗಾಗಿ ಅತ್ತ ಮುಖ ಮಾಡಿದ್ದಾರೆ. ಹೀಗಾಗಿ, ಈ ಭಾಗದ ಜಾತ್ರಾ ಮಹೋತ್ಸವಗಳಲ್ಲೀಗ ರಾಜಕೀಯ ರಂಗು.
ಜಾತ್ರೆಯಲ್ಲಿ ಕಾರ್ಯಕರ್ತರು: ಜಾತ್ರೆ ಎಂದರೆ ಕೇಳಬೇಕೆ? ಸುತ್ತಮುತ್ತಲಿನ ಹಳ್ಳಿಯ ಜನ ಅಲ್ಲಿ ಬಂದು ಸೇರುತ್ತಿದ್ದಾರೆ. ಹೀಗಾಗಿ, ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ವಾರ್ಡ್, ಹಳ್ಳಿಯಲ್ಲಿರುವ ನಾಲ್ಕಾರು ಮನೆಗಳನ್ನು ಸುತ್ತುವುದನ್ನು ಬಿಟ್ಟು ಜಾತ್ರೆ ಇದ್ದ ಕಡೆಗಳಲ್ಲಿ ಪ್ರಚಾರ ಶಿಫ್ಟ್ ಮಾಡಿಕೊಂಡಿದ್ದಾರೆ. ವಿವಿಧ ಪಕ್ಷಗಳ ಕಾರ್ಯಕರ್ತರು ಜಾತ್ರೆಯಲ್ಲಿ ಹಾಜರಾಗಿ, ಜನರನ್ನು ಕಂಡು ನಮಸ್ಕರಿಸಿ, 'ನಮ್ಮ ಬಗ್ಗೆ ಕಾಳಜಿ ಇರಲಿ, ಕೈ ಬಿಡಬೇಡಿ' ಎಂದು ಬಿನ್ನವಿಸಿಕೊಳ್ಳುತ್ತಿದ್ದಾರೆ. ಹಿರಿಯರು ಕಂಡರೆ ಕಾಲಿಗೆರಗಿ, 'ನಿಮ್ಮ ಆಶೀರ್ವಾದವಿರಲಿ' ಎನ್ನುತ್ತಿದ್ದಾರೆ.
ಜಾತ್ರಿ ಸ್ವೀಟ್: ಮಹಿಳೆಯರು ಬಂದರೆ, 'ಅಕ್ಕಾ, ವೈನಿ ಹೇಗಿದ್ದೀರಿ? ನಮ್ಮನ್ನ ಮರಿಬ್ಯಾಡ್ರಿ' ಎಂದು ಪೀಠಿಕೆ ಹಾಕುತ್ತಾ ಮತ ಗಿಟ್ಟಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಜಾತ್ರೆಯಲ್ಲಿ ಬಂದಿರುವ ಸಿಹಿ ತಿಂಡಿ ಖರೀದಿಸಿ ಪೊಟ್ಟಣ ಕೈಗಿತ್ತು ನಗೆ ಬೀರುತ್ತಿದ್ದಾರೆ. ಪುಟ್ಟ ಮಕ್ಕಳನ್ನು ಎತ್ತಿಕೊಂಡು ಬಂದವರಿಗೆ ಐಸ್‌ಕ್ರೀಮ್, ಆಟಿಕೆ ಸಾಮಾನುಗಳನ್ನು ಕೊಡಿಸಿ, ಮನ ಗೆಲ್ಲಲು ಯತ್ನಿಸುತ್ತಿದ್ದಾರೆ.
ಮಿರ್ಚಿ-ಬಜಿ, ಗಿರ್‌ಮಿಟ್: ಉತ್ತರ ಕರ್ನಾಟಕದ ಜಾತ್ರೆ ಎಂದರೆ ಮಿರ್ಚಿ-ಬಜಿ, ಗಿರಮಿಟ್ ಇದ್ದೇ ಇರುತ್ತದೆ. ಜಾತ್ರೆಯಲ್ಲಿ ಹಾಕಿರುವ ಟೀ-ಸ್ಟಾಲ್‌ಗಳಲ್ಲಿ ಸಿದ್ಧವಾಗುತ್ತಿರುವ ಬಿಸಿ ಬಿಸಿ ಮಿರ್ಚಿ, ಬಜಿ, ಗಿರ್‌ಮಿಟ್‌ಗಳನ್ನು ಜನರಿಗೆ ಪುಕ್ಕಟೆ ತಿನ್ನಿಸುತ್ತಾರೆ. ಇದರ ಪ್ರಾಯೋಜಕರು ವಿವಿಧ ಪಕ್ಷಗಳ ಮುಖಂಡರು. ಪುಕ್ಕಟೆ ಸಿಗುತ್ತದೆ ಎಂದ ಮೇಲೆ ಕೇಳಬೇಕೇ? ಪಕ್ಷ ಯಾವುದಾದರೇನು? ಸಿಕ್ಕಿದ್ದೇ ಸೀರುಂಡೆ ಎಂದು ಜಾತ್ರೆಗೆ ಬಂದ ಮಂದಿ ಬಾಯಿ ಚಪ್ಪರಿಸಿಕೊಂಡು ಮಿರ್ಚಿ, ಬಜಿ, ಗಿರ್‌ಮಿಟ್ ಮೆಲ್ಲುತ್ತಿದ್ದಾರೆ.
ಜಾತ್ರೆ ತುಂಬ ಓಡಾಡುತ್ತಿರುವ ಕಾರ್ಯಕರ್ತರು ಜನರೊಂದಿಗೆ ಮಾತಿಗಿಳಿದು, ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಚಿಹ್ನೆ ಯಾವುದೆಂದೂ ತೋರಿಸುತ್ತಿದ್ದಾರೆ. ಹೀಗಾಗಿ ಜಾತ್ರೆಯಲ್ಲಿ ರಾಜಕೀಯದ ಝಲಕ್ ಕಾಣಿಸ ತೊಡಗಿದೆ.
-ಪ್ರಕಾಶ ಎಸ್. ಶೇಟ್