ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಲ್ಲಿಕಾರ್ಜುನ ಜಾತ್ರೆಯಲ್ಲಿ ಮಕ್ಕಳ ಪಾರುಪತ್ಯ

Lingaraj Badiger
Updated On : 2 May 2014, 12:01 pm

ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 1
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಹಿರಿಯರ ಪಾರುಪತ್ಯ ಜೋರು. ಆದರೆ, ಇದಕ್ಕೆ ಅಪವಾದ ಎಂಬಂತೆ ಹೆಬ್ಬಳ್ಳಿ ಮಲ್ಲಿಕಾರ್ಜುನ ದೇವರ ಜಾತ್ರೆ ಮತ್ತು ರಥೋತ್ಸವದಲ್ಲಿ ಚಿಣ್ಣರದ್ದೇ ಪಾರುಪತ್ಯ. ಹಿರಿಯರು ಇಲ್ಲಿ ಏನಿದ್ದರೂ ಪ್ರೇಕ್ಷಕರು ಮಾತ್ರ.
ವಿಶಿಷ್ಟ ಆಧ್ಮಾತ್ಮಿಕ ಪರಂಪರೆ ಹೊಂದಿರುವ ಧಾರವಾಡ ತಾಲೂಕಿನ ಹೆಬ್ಬಳ್ಳಿ 101 ದೇವಸ್ಥಾನ ಮತ್ತು ಅಷ್ಟೇ ಸಂಖ್ಯೆಯ ಬಾವಿಗಳನ್ನು ಹೊಂದಿದೆ. ಬಸವ ಜಯಂತಿಯಂದು ಇಲ್ಲಿನ ಎಲ್ಲ ದೇವಸ್ಥಾನಗಳಲ್ಲಿ ಹಲವು ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಮುಖ್ಯವಾಗಿ ಮಲ್ಲಿಕಾರ್ಜುನ ದೇವರ ಜಾತ್ರೆ ಹಾಗೂ ರಥೋತ್ಸವದಲ್ಲಿ ಅಭಿಷೇಕದಿಂದ ಹಿಡಿದು ತೇರೆಳೆಯುವ ವರೆಗೆ ಎಲ್ಲ ಕೆಲಸಗಳನ್ನೂ ಮಕ್ಕಳೇ ಮಾಡುತ್ತಾರೆ.
ಐದಡಿ ಎತ್ತರದ ರಥ: ಬಸವ ಜಯಂತಿ ನಿಮಿತ್ತ ಸಿದ್ಧಪಡಿಸುವ 5 ಅಡಿ ಎತ್ತರದ ರಥವನ್ನು ಚಿಕ್ಕಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಎಳೆಯುತ್ತಾರೆ. ಜಾತ್ರೆಗೆ ಪೆಂಡಾಲ್ ಹಾಕುವುದು, ವಾದ್ಯ ಮೇಳದವರನ್ನು ಆಹ್ವಾನಿಸುವುದೂ ಮಕ್ಕಳೇ.
ಹಿರಿಯರ ನೇತೃತ್ವದಲ್ಲಿ ನಡೆಯುವ ಜಾತ್ರೆಗೆ ಕರೆತರುವ ಜಾಂಜ್ ಮೇಳ, ಕರಡಿ ಕುಣಿತ, ಆನೆ, ಹಾಡುಗಾರರನ್ನು, ಆಕರ್ಷಕ ಗೊಂಬೆಗಳ ಕುಣಿತಕ್ಕೆ ಹಣ ವೆಚ್ಚ ಮಾಡಬೇಕಾಗುತ್ತದೆ. ಆದರೆ, ಇಲ್ಲಿನ ಮಕ್ಕಳು ಗ್ರಾಮದ ಕಲಾವಿದರನ್ನೇ ಬಳಸಿಕೊಳ್ಳುತ್ತಾರೆ. ಕೋಲಾಟ, ಹೆಜ್ಜೆ ಮೇಳ, ಭಜನಾ ಗೀತೆಯನ್ನು ಮನರಂಜನೆಗಾಗಿ ಬಳಸಿಕೊಳ್ಳುತ್ತಾರೆ. ಚಿಣ್ಣರೇ ಸ್ವತಃ ಜಾನಪದ ಕಲಾವಿದರ ಬಳಿ ಹೋಗಿ ದುಂಬಾಲು ಬಿದ್ದು, ಜಾತ್ರೆಗೆ  ಆಗಮಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ. ಈ ಬಾರಿ ಜಾತ್ರೆಯಲ್ಲಿ ಐದು ಕೋಲಾಟ ತಂಡಗಳು, ಹೆಜ್ಜೆ ಮೇಳ ಹಾಗೂ ಭಜನಾ ಸಂಘಗಳು ಭಾಗವಹಿಸುತ್ತಿವೆ.

ತೇರೆಳೆಯುವ ಸಂಭ್ರಮ
ಬಸವ ಜಯಂತಿಯ ದಿನ ಬೆಳಗ್ಗೆ ದೇವರ ಪೂಜೆಯಲ್ಲಿ ಚಿಣ್ಣರು ಭಾಗಿಯಾಗಿ, ಮಧ್ಯಾಹ್ನ ಪ್ರಸಾದ ವಿತರಣೆ ಮಾಡುತ್ತಾರೆ. ಸಂಜೆ 4ಕ್ಕೆ ತೇರೆಳೆಯುತ್ತಾರೆ. ಗ್ರಾಮದ ಹಿರಿಯರು ಈ ಸಂಭ್ರಮಕ್ಕೆ ಸಾಕ್ಷಿಯಾಗುತ್ತಾರೆ. ಆದರೆ, ಚಿಣ್ಣರ ಹಬ್ಬದಲ್ಲಿ ಅವರು ಮೂಗು ತೂರಿಸುವುದಿಲ್ಲ ಎಂಬುದು ಇನ್ನೊಂದು ವಿಶೇಷ. ಬಸವ ಜಯಂತಿ ಬಂತೆಂದರೆ ಹೆಬ್ಬಳ್ಳಿಯ ಚಿಣ್ಣರಲ್ಲಿ ಹಬ್ಬದ ಕಳೆಗಟ್ಟಲು ಶುರುವಾಗುತ್ತದೆ. 15 ದಿನಗಳಿಗೆ ಮೊದಲೇ ಗ್ರಾಮದ ಮಕ್ಕಳೆಲ್ಲ ಸಭೆ ಸೇರಿ ಜಾತ್ರಾ ಮಹೋತ್ಸವ ಸಮಿತಿ ಮಾಡಿಕೊಳ್ಳುತ್ತಾರೆ. ತಂಡವಾಗಿ ವಿಭಜಿಸಿಕೊಂಡು ಮನೆ ಮನೆಗೆ ತೆರಳಿ ಚಂದಾ ಎತ್ತುತ್ತಾರೆ. ಆ ಹಣದಿಂದ ಜಾತ್ರೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ರಥ ಶೃಂಗರಿಸುತ್ತಾರೆ. ಉತ್ಸವ ಮೂರ್ತಿ ಮಲ್ಲಿಕಾರ್ಜುನನಿಗೆ ಚಿನ್ನದ ಸರ ಹಾಗೂ ಬೆಳ್ಳಿಯ ಆಭರಣಗಳನ್ನು ಹಾಕಿ, ಜಾತ್ರೆ ಮುಗಿದ ಬಳಿಕ ಎಲ್ಲ ವಸ್ತುಗಳನ್ನೂ ಹರಾಜು ಹಾಕುತ್ತಾರೆ. ಬಂದ ಹಣವನ್ನು ಮುಂದಿನ ವರ್ಷದ ಜಾತ್ರೆಗೆಂದು ಕಾಪಿಡುತ್ತಾರೆ.
ದೇಗುಲ, ಬಾವಿಗಳ ಗ್ರಾಮ
ಹೆಬ್ಬಳ್ಳಿ  ನೋಡಿದರೆ. ದೇವಾಲಯಗಳ ಮಧ್ಯೆ ಗ್ರಾಮವಿದೆಯೋ ಗ್ರಾಮದ ಮಧ್ಯೆ ದೇವಾಲಯಗಳಿವೆಯೋ ಎಂಬ ಸಂದೇಹ ಬಾರದಿರದು. ಲಕ್ಷ್ಮೀ ವೆಂಕಟೇಶ, ಪಂಡರಪುರ ವಿಠ್ಠಲ, ಸತ್ಯನಾರಾಯಣ, ಶ್ರೀರಾಮ, ಹನುಮಂತ, ಚಿದಂಬರ, ಕಾಶಿ ವಿಶ್ವನಾಥ, ಮೂಗ ಬಸವೇಶ್ವರ, ವೀರಭದ್ರೇಶ್ವರ, ದುರ್ಗೆ, ಗಣೇಶ - ಹೀಗೆ ದೇವಸ್ಥಾನಗಳ ಪಟ್ಟಿ ಬೆಳೆದು, 101ಕ್ಕೆ ನಿಲ್ಲುತ್ತದೆ.

ಮಕ್ಕಳ ವಿಶೇಷ ಜಾತ್ರೆ
ಈ ಜಾತ್ರೆಯನ್ನು ಚಿಣ್ಣರು ಕೇವಲ ಹವ್ಯಾಸಕ್ಕಾಗಿ ಅಥವಾ ಮನೋರಂಜನೆಗಾಗಿ ಆಚರಿಸುವುದಿಲ್ಲ. ಭಕ್ತಿ, ಭಾವದಿಂದ ಪಾಲ್ಗೊಳ್ಳುತ್ತಾರೆ. ಹಿರಿಯರಿಗಿಂತಲೂ ವಿಭಿನ್ನವಾಗಿ ಕಾರ್ಯಕ್ರಮ ಆಯೋಜಿಸುತ್ತಾರೆ. ಗ್ರಾಮದ ಜಾತ್ರೆಗಳಲ್ಲಿ ಮಲ್ಲಿಕಾರ್ಜುನ ರಥೋತ್ಸವವೇ ವಿಶಿಷ್ಟ. ಅದಕ್ಕೆ ಕಾರಣ ಮಕ್ಕಳು. ದುಂದು ವೆಚ್ಚಕ್ಕೆ ಅವಕಾಶವಿಲ್ಲದಂತೆ ಶಿಸ್ತು, ಅಚ್ಚುಕಟ್ಟುತನದಿಂದ ಮಕ್ಕಳು ಈ ಜಾತ್ರೆ ಆಚರಿಸುತ್ತಾರೆ.
- ಎಲ್.ಐ. ಲಕ್ಕಮ್ಮನವರ,
ಶಿಕ್ಷಕರು, ಹೆಬ್ಬಳ್ಳಿ
--ಹೊನ್ನಪ್ಪ ಲಕ್ಕಮ್ಮನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement