5ರಂದು ಹುಬ್ಬಳ್ಳಿ ಬಂದ್ ಕರೆ
ಹುಬ್ಬಳ್ಳಿ: ಬಾಬಾ ರಾಮದೇವ್ ಅವರ ದಲಿತ ವಿರೋಧಿ ಹೇಳಿಕೆಯನ್ನು ಖಂಡಿಸಿ ಮೇ 5ರಂದು ದಲಿತ ಸಂಘ-ಸಂಸ್ಥೆಗಳ ಮಹಾಮಂಡಳದಿಂದ ಹುಬ್ಬಳ್ಳಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಮತಾ ಸೇನೆ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಹುಲ್ ಗಾಂಧಿ ದಲಿತರ ಮನೆಯಲ್ಲಿ ಹನಿಮೂನ್ ಮತ್ತು ಪಿಕನಿಕ್ ಮಾಡುವುದಕ್ಕಾಗಿ ವಾಸ್ತವ್ಯ ಮಾಡುತ್ತಾರೆ ಎಂದು ಹೇಳುವ ಮೂಲಕ ದಲಿತ ಮಹಿಳೆಯರನ್ನು ಅವಮಾನಿಸಿದ್ದಾರೆ. ಇಂತಹ ಹೇಳಿಕೆ ನೀಡುವ ತಮ್ಮ ಹೀನ ಮನಸ್ಥಿತಿ ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಿದರು. ಅಂದು ಬೆಳಗ್ಗೆ ನಗರದಲ್ಲಿ ಬಂದ್ ಕರೆ ನೀಡಲಾಗಿದ್ದು, ಸಂಜೆ ರಾಮದೇವ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮತ್ತು ಅಸ್ಪೃಷ್ಯತಾ ನಿಗ್ರಹ ಮತ್ತು ದಲಿತ ಮಹಿಳಾ ದೌರ್ಜನ್ಯ ವಿರೋಧಿ ಕಾನೂನು ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪೊಲೀಸ್ ಕಮಿಷನರ್ ರವೀಂದ್ರಪ್ರಸಾದ ಅವರಿಗೆ ಮನವಿ ಸಲ್ಲಿಸಲಾಗುವುದು. ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಪ್ರತಿಭಟನೆ, ಬಂದ್‌ಗೆ ಅವಕಾಶವಿಲ್ಲದಿದ್ದರೂ ದಲಿತ ಸಂಘಟನೆಗಳಿಂದ ಬಂದ್ ಆಚರಿಸುವುದಕ್ಕೆ ತೀರ್ಮಾನಿಸಲಾಗಿದೆ. ಬಂದ್ ಕರೆ ಹಿಂಪಡೆಯುವುದಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಪಿತಾಂಬ್ರಪ್ಪ ಬಿಳಾರ, ಕೃಷ್ಣಾ ಜಕ್ಕಪ್ಪನವರ, ಗಣೇಶ ದೊಡಮನಿ, ರಾಜಪ್ಪ ಕಾಳೆ ಸೇರಿದಂತೆ ಇತರರು ಇದ್ದರು.
ವೃತ್ತ ಪತ್ರಿಕೆ ಮಾರಾಟಗಾರರ ವಾರ್ಷಿಕೋತ್ಸವ: ಸನ್ಮಾನ
ಹುಬ್ಬಳ್ಳಿ: ವೃತ್ತಪತ್ರಿಕೆ ಮಾರಾಟಗಾರ ಸಂಘದ ವಾರ್ಷಿಕೋತ್ಸವ ಈಚೆಗೆ ಹುಬ್ಬಳ್ಳಿಯ ಪಾಲಿಕೆ ನೌಕರರ ಸಭಾ ಭವನದಲ್ಲಿ ಜರುಗಿತು. ವಾರ್ಷಿಕೋತ್ಸವದಲ್ಲಿ ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ಮನೆ ಮನೆಗೆ ಪತ್ರಿಕೆ ವಿತರಿಸಿ ಮಾರಾಟಗಾರರಾಗಿ ಸೇವೆ ಸಲ್ಲಿಸಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎ.ಆರ್. ಪವಾರ, ಪತ್ರಿಕೆ ವಿತರಣೆ ದೈಹಿಕ ಮತ್ತು ಮಾನಸಿಕ ಶ್ರಮ ಬೇಡುತ್ತದೆ. ನಮ್ಮ ಬದುಕಿನ ಎಲ್ಲ ಒತ್ತಡಗಳನ್ನು ಮೀರಿ ವರ್ಷದ ಎಲ್ಲ ದಿನಗಳಂದು ಸಮಯಕ್ಕೆ ಸರಿಯಾಗಿ ಪತ್ರಿಕೆ ವಿತರಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮತ್ತು ಸಮಯ ಪ್ರಜ್ಞೆ ಎರಡನ್ನೂ ಮೆರೆದಿದ್ದೇವೆ. ಬೇರು ಮಟ್ಟದಲ್ಲಿ ಕೆಲಸ ಮಾಡುತ್ತಿರುವ ನಮಗೆ ಮಾರುಕಟ್ಟೆಗೆ ಅನುಗುಣವಾಗಿ ಪತ್ರಿಕೆಯ ಕಮಿಷನ್ ನಿಗದಿ ಮಾಡಬೇಕು ಎಂದು ಹೇಳಿದರು. ಪತ್ರಿಕೆ ಹಾಕುವವರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ. ರೈಲ್ವೆ ಸ್ಟೇಷನ್‌ನಲ್ಲಿ ಪತ್ರಿಕೆ ಹಾಕುವುದಕ್ಕೆ ಅಲ್ಲಿನ ಸಿಬ್ಬಂದಿ ಬಿಡುತ್ತಿಲ್ಲ. ರೈಲ್ವೆ ಸಿಬ್ಬಂದಿ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘದ ಕಾರ್ಯದರ್ಶಿ ಸುನಿಲ ಚಿಲ್ಲಾಳ ಹೇಳಿದರು. ಸಂಘದ ಅಧ್ಯಕ್ಷ ಆರ್.ಸಿ. ಜಿತೂರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿ.ಎಸ್. ಹಿರೇಮಠ, ಜೆ.ಎ. ಪಠಾರೆ, ಪತ್ರಕರ್ತರಾದ ಮೋಹನ್ ಹೆಗ್ಡೆ, ಎಂ.ಬಿ. ಪಟ್ಟಣಶೆಟ್ಟಿ, ಎ.ಸಿ. ಗೋಪಾಲ, ಎಂ.ಪಿ. ಜಗನ್ನಾಥ, ಆನಂದ ಮಾಳಗಿ, ಡಿ.ಪಿ. ಶ್ರೀನಿವಾಸ ಇದ್ದರು.