ಶಿಕ್ಷಕರ ಅರ್ಹತಾ ಪರೀಕ್ಷೆ ಮುಂದೂಡಿಕೆ: ಎಐಡಿವೈಒ ಜಿಲ್ಲಾ ಸಮಿತಿ ಸ್ವಾಗತ
ಧಾರವಾಡ: ಹಲವು ರೀತಿಯ ಗೊಂದಲಗಳಿಂದ ಲಕ್ಷಾಂತರ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳನ್ನು ಆತಂಕಕ್ಕೆ ತಳ್ಳಿರುವ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)ಯನ್ನು ಮುಂದೂಡಿರುವ ಕ್ರಮಕ್ಕೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಜೇಶನ್ (ಎಐಡಿವೈಓ) ಜಿಲ್ಲಾ ಸಮಿತಿ ಸ್ವಾಗತಿಸಿದೆ.
ರಾಜ್ಯಾದ್ಯಂತ ಡಿ.ಇಡಿ ಮತ್ತು ಬಿ.ಇಡಿ ತರಬೇತಿ ಪಡೆದವರು, ಪೋಷಕರು, ಈಗಾಗಲೇ ಶಿಕ್ಷಕರಾಗಿ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ದುಡಿಯುತ್ತಿರುವವರ ಆತಂಕ ದೂರವಾಗಬೇಕಾದರೆ ಟಿಇಟಿ ಎಂಬ ಸಿಇಟಿ ಬರೆಯಲು ಮೆಟ್ಟಿಲಾಗಿಸಿರುವುದು, ದುಬಾರಿ ಪರೀಕ್ಷಾ ಶುಲ್ಕವನ್ನು ನಿಗದಿಪಡಿಸಿರುವುದು ಸರಿಯಾದ ಕ್ರಮಗಳಲ್ಲ ಎಂದೂ ಸಮಿತಿ ತಿಳಿಸಿದೆ. ಶಿಕ್ಷಕರ ತರಬೇತಿಯಲ್ಲಿ ದೇಶದಾದ್ಯಂತ ಏಕರೂಪದ ಪಠ್ಯಕ್ರಮ ಜಾರಿಯಲ್ಲಿ ಇಲ್ಲದಿರುವ ಹಿನ್ನಲೆಯಲ್ಲಿ, ಟಿ.ಇ.ಟಿಯಲ್ಲಿ ಮಾತ್ರ ದೇಶದಾದ್ಯಂತ ಒಂದೇ ರೀತಿಯ ಪಠ್ಯಕ್ರಮ ಹಾಗೂ ಪರೀಕ್ಷಾ ವಿಧಾನವನ್ನು ಹೇರಿರುವುದು ಅಸಮಂಜಸ.
ಮಾತೃ ಭಾಷೆಯಲ್ಲಿ ಪಠ್ಯಕ್ರಮ ಲಭ್ಯವಿಲ್ಲದಿರುವುದು ಅವೈಜ್ಞಾನಿಕ, ಅಪ್ರಜಾಸತ್ತಾತ್ಮಕ ಆಗಿರುವುದರಿಂದ ಈ ಕೂಡಲೇ ಅಭ್ಯರ್ಥಿಗಳ ಎಲ್ಲ ಗೊಂದಲಗಳಿಗೆ ಸ್ಪಷ್ಟ ಉತ್ತರ ನೀಡಬೇಕು ಮತ್ತು ಈ ಎಲ್ಲ ಅಂಶಗಳ ಕುರಿತು ಶಿಕ್ಷಣ ತಜ್ಞರೊಂದಿಗೆ ಯುವಜನ ಸಂಘಟನೆಗಳೊಂದಿಗೆ ಚರ್ಚಿಸಿ ಉದ್ಯೋಗಾಕಾಂಕ್ಷಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದೂ ಸಮಿತಿ ಆಗ್ರಹಿಸಿದೆ.