ವಿಕೋಪ ತಡೆಗೆ ಕಾರ್ಯಪಡೆ
ಆನಂದ ಅಂಗಡಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 3
ಮಳೆ ಮತ್ತಿತರ ನೈಸರ್ಗಿಕ ವಿಕೋಪಗಳ ಹಾನಿ ಸಂದರ್ಭದಲ್ಲಿ ತುರ್ತಾಗಿ ಪರಿಸ್ಥಿತಿ ನಿಭಾಯಿಸಲು ವಿವಿಧ ಇಲಾಖೆಗಳ ಪರಿಣಿತ ಸಿಬ್ಬಂದಿಯನ್ನೊಳಗೊಂಡ ಟಾಸ್ಕ್ಫೋರ್ಸ್ ಒಂದು ವಾರದಲ್ಲಿ ಸಿದ್ಧಗೊಳ್ಳುವ ಸಾಧ್ಯತೆ ಇದೆ.
ತುರ್ತು ಪರಿಸ್ಥಿತಿ ನಿಭಾಯಿಸಲು ಇದೇ ಮೊದಲ ಬಾರಿಗೆ ಮಹಾನಗರ ಪಾಲಿಕೆ ವಿವಿಧ ಇಲಾಖೆಯ ಪರಿಣಿತ ಸಿಬ್ಬಂದಿ ಹೊಂದಿರುವ ಟಾಸ್ಕ್ಫೋರ್ಸ್ ರಚನೆಗೆ ಮುಂದಾಗಿದ್ದು, ಇದಕ್ಕಾಗಿ ಸಂಬಂಧಿಸಿದ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಶೀಘ್ರ ಸಭೆ ನಡೆಯಲಿದೆ. ನೈಸರ್ಗಿಕ ವಿಕೋಪ ನಿಭಾಯಿಸುವುದಕ್ಕಾಗಿ ಮಹಾನಗರ ಪಾಲಿಕೆ ಪ್ರತಿ ಮಳೆಗಾಲದ ಮುಂಚೆ ಟಾಸ್ಕ್ಫೋರ್ಸ್ ರಚಿಸುತ್ತಿತ್ತು. ಆದರೆ ಕೇವಲ ಪೌರ ಕಾರ್ಮಿಕರು ಹಾಗೂ ಪಾಲಿಕೆಯ ಬೆರಳೆಣಿಕೆಯ ಅಧಿಕಾರಿಗಳು ಈ ಟಾಸ್ಕ್ಪೋರ್ಸ್ನಲ್ಲಿರುತ್ತಿದ್ದರು.
ಕಳೆದ ಒಂದು ವಾರದಿಂದ ಬಿರುಗಾಳಿ ಮಿಶ್ರಿತ ಭಾರಿ ಮಳೆ ಸುರಿಯುತ್ತಿರುವುದರಿಂದ ಆಗುತ್ತಿರುವ ಹಾನಿ ಮನಗಂಡ ಮೇಯರ್ ಶಿವು ಹಿರೇಮಠ ಹಾಗೂ ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಟಾಸ್ಕ್ಫೋರ್ಸ್ ರಚನೆಗೆ ವಿವಿಧ ಇಲಾಖೆಗಳ ಸಹಕಾರ ಕೋರಲಿದ್ದಾರೆ. ಮಹಾನಗರ ಪಾಲಿಕೆ ಸಿಬ್ಬಂದಿ ಜೊತೆಗೆ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಅಗ್ನಿಶಾಮಕ ದಳ, ಹೆಸ್ಕಾಂ, ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಜಲಮಂಡಳಿ ಇಲಾಖೆಗಳ ಪರಿಣಿತ ಸಿಬ್ಬಂದಿ ಈ ಟಾಸ್ಕ್ಫೋರ್ಸ್ನಲ್ಲಿರಲಿದ್ದಾರೆ.
ಮುಂಬೈ, ಚೆನೈ, ದಿಲ್ಲಿಗಳಂತ ಮೆಟ್ರೊಪಾಲಿಟಿನ್ ಸಿಟಿಗಳಲ್ಲಿ ಈಗಾಗಲೇ ವಿವಿಧ ಇಲಾಖೆಗಳ ಪರಿಣಿತ ಸಿಬ್ಬಂದಿಯನ್ನೊಳಗೊಂಡ ಟಾಸ್ಕ್ಫೋರ್ಸ್ಗಳು ತುರ್ತು ಸಂದರ್ಭದ ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ರಚಿತಗೊಂಡಿವೆ. ಇದೇ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿಯೂ ಟಾಸ್ಕ್ಫೋರ್ಸ್ ರಚಿತಗೊಳ್ಳಲಿದೆ. ಟಾಸ್ಕ್ಫೋರ್ಸ್ಗೆ ರಚನೆ ನಂತರ ಅಗತ್ಯ ಸೌಲಭ್ಯ ಒದಗಿಸುವ ಯೋಜನೆಯೂ ಪಾಲಿಕೆಗಿದ್ದು, ಸಂಬಂಧಿಸಿದ ಇಲಾಖೆಯ ಸಹಕಾರ ಅಗತ್ಯ.
ಅವಳಿ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಕಳೆದ ಸುಮಾರು ಒಂದು ವಾರದಿಂದ ಸುರಿಯುತ್ತಿರುವ ಬಿರುಗಾಳಿ ಮಿಶ್ರಿತ ಭಾರಿ ಮಳೆಗೆ ಅನೇಕ ಮರ, ವಿದ್ಯುತ್ ಕಂಬಗಳು ಬಿದ್ದು ಸಾಕಷ್ಟು ಹಾನಿಯಾಗಿದೆ. ಹಲವಾರು ಮನೆಗಳೂ ಭಾಗಶಃ ಬಿದ್ದಿದ್ದು, ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ನೀರಿನ ಜೊತೆಗೆ ಚರಂಡಿ ನೀರೂ ನುಗ್ಗಿ ಜನಸಾಮಾನ್ಯರು ಸಾಕಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ.
ಈ ಸಂದರ್ಭದಲ್ಲಿ ನಾಗರಿಕರು ಪಾಲಿಕೆಯ ಕಂಟ್ರೋಲ್ ರೂಮ್ಗೆ ಕರೆ ಮಾಡಿ ದೂರು ನೀಡಿದ್ದಾರೆ. ಆದರೆ ಪರಿಣಿತ ಸಿಬ್ಬಂದಿಯ ಕೊರತೆಯಿಂದಾಗಿ ಹಾನಿಗೀಡಾದ ಪ್ರದೇಶಗಳಲ್ಲಿ ತುರ್ತು ಕಾರ್ಯಾಚರಣೆ ಸಾಕಷ್ಟು ಪರಿಣಾಮಕಾರಿಯಾಗಿಲ್ಲವೆಂಬ ದೂರು ನಾಗರಿಕರದ್ದು.
ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದಾಗ ಪಾಲಿಕೆ ಸಿಬ್ಬಂದಿ ಮರ ಕಡಿದು ಹಾಕುತ್ತಾರೆ. ನಂತರ ಹೆಸ್ಕಾ ಸಿಬ್ಬಂದಿ ವಿದ್ಯುತ್ ಕಂಬ ಹಾಗೂ ತಂತಿ ಸರಿಪಡಿಸಲು ಮುಂದಾಗುತ್ತಾರೆ. ಇದೇ ರೀತಿ ವಿವಿಧ ಇಲಾಖೆ ಕಾರ್ಯಗಳು ಪ್ರತ್ಯೇಕವಾಗಿ ನಡೆಯುತ್ತಿವೆ. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುವುದರೊಂದಿಗೆ ವಿವಿಧ ಇಲಾಖೆಗಳ ಮಧ್ಯೆ ಸಂವಹನದ ಕೊರತೆಯೂ ಉಂಟಾಗುತ್ತದೆ. ಆದರೆ ವಿವಿಧ ಸಂಬಂಧಿಸಿದ ಇಲಾಖೆಗಳ ಪರಿಣಿತ ಸಿಬ್ಬಂದಿಯನ್ನೊಳಗೊಂಡ ಟಾಸ್ಕ್ಫೋರ್ಸ್ ರಚಿಸಿದಲ್ಲಿ ನೈಸರ್ಗಿಕ ವಿಪ್ಪತ್ತು ನಿರ್ವಹಣೆ ಪರಿಣಾಮಕಾರಿಯಾಗಿ ಆದೀತು.
ವಿದ್ಯಾಕಾಶಿಯಲ್ಲಿ ಇದೀಗ ಗಾಂಜಾ, ಕಳ್ಳಬಟ್ಟಿ ಹಾವಳಿ
ಸುಸಂಸ್ಕೃತ ನಗರಿ, ವಿದ್ಯಾಕಾಶಿಯಲ್ಲಿ ವಿದ್ಯಾರ್ಥಿಗಳು ಗಾಂಜಾ ದಾಸರಾಗುತ್ತಿರುವ ಭಯಾನಕ ವಿಷಯ ಬಹಿರಂಗವಾಗುತ್ತಿದೆ. ಅದರಂತೆ ಕಳ್ಳಬಟ್ಟಿ ಸಾರಾಯಿ ಮಾರಾಟ ಹಲವೆಡೆ ಇಂದಿಗೂ ಇಲ್ಲಿ ಜೀವಂತವಾಗಿದೆ. ಇಲ್ಲಿನ ಹಲವು ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಆಧುನಿಕ ಭರಾಟೆಗೆ ಆಕರ್ಷಿತರಾಗಿ ನಶೆಯ ಬಲಿಗೆ ಬೀಳುತ್ತಿದ್ದಾರೆ.
ಗಾಂಜಾ, ಕಳ್ಳಬಟ್ಟಿಯಂಥ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಕಾಣ ಸಿಗುತ್ತಿರುವುದು ಧಾರವಾಡ ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಇಲ್ಲಿನ ಜನ್ನತ ನಗರದಲ್ಲಿನ ಮನೆಯೊಂದರಲ್ಲಿ ಹಲವು ದಿನಗಳಿಂದಲೂ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು ವಿದ್ಯಾಕಾಶಿಯಲ್ಲಿ ಈ ಅಕ್ರಮ ಚಟುವಟಿಕೆ ಸಕ್ರಿಯವಾಗಿದೆ ಎಂಬುದಕ್ಕೆ ಪುಷ್ಟಿ ನೀಡಿದೆ.
ಬಂಧಿತ ಮಹಿಳೆಯಿಂದ ಗಾಂಜಾ ಖರೀದಿಸುವವರು ಕಾಲೇಜು ವಿದ್ಯಾರ್ಥಿಗಳು ಮಾತ್ರ ಎಂಬುದು ಭಯಾನಕ ಸಂಗತಿ. ಇಲ್ಲಿಯ ಹಲವು ಕಾಲೇಜು ವಿದ್ಯಾರ್ಥಿಗಳು ಗಾಂಜಾ, ಕಳ್ಳಬಟ್ಟಿ ಸಾರಾಯಿ ದಾಸರಾಗುತ್ತಿರುವ ವಿಷಯ ನಗರದ ತುಂಬ ಹರಿದಾಡುತ್ತಿದೆ. ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾರ್ಜನೆಗಾಗಿ ನಗರಕ್ಕೆ ಆಗಮಿಸುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಾಂಜಾ ದಾಸರಾಗಿರುವ ವಿಷಯ ಆಯಾ ಕಾಲೇಜು ಕ್ಯಾಂಪಸ್ಗಳಲ್ಲಿ ಗುಸು ಗುಸು ಸುದ್ದಿಯಾಗಿದೆ.
ಓಣಿ-ಓಣಿಯಲ್ಲಿ: ಇಂದಿಗೂ ಕಳ್ಳಬಟ್ಟಿ ಸಾರಾಯಿ ತಯಾರಿಕೆ, ಗಾಂಜಾ ಮಾರಾಟ ನಗರದಲ್ಲಿ ಜೀವಂತವಾಗಿದೆ. ಪ್ರತಿದಿನ ಬೆಳಗಿನಜಾವ 5 ಗಂಟೆಯಿಂದ 10ರ ವರೆಗೆ ಹಾಗೂ ಸಂಜೆ 6 ರಿಂದ ರಾತ್ರಿ 10 ರವರೆಗೆ ರಾಜಾರೋಷವಾಗಿ ಕಳ್ಳಬಟ್ಟಿ ಸಾರಾಯಿ ಇಲ್ಲಿ ಲಭ್ಯ ಎನ್ನಲಾಗಿದೆ.
ಧಾರವಾಡದ ಮದಾರಮಡ್ಡಿಯ ಭಜಂತ್ರಿ ಓಣಿ, ಕಿಲ್ಲಾ, ಆಝಾದ್ನಗರದ ಗುಬ್ಬಿಚಾಳಗಳಲ್ಲಿ ಇಂದಿಗೂ ಕಳ್ಳಬಟ್ಟಿ ಸಾರಾಯಿ ತಯಾರಿಸಿ, ಮಾರಾಟ ಮಾಡಲಾಗುತ್ತಿದೆ. ಕಳ್ಳಬಟ್ಟಿ ಸಾರಾಯಿ ಕುಡಿದು ಈಗಾಗಲೇ ಮೂವರು ಸಾವನ್ನಪ್ಪಿದ್ದಾರೆ. ಸಾರಾಯಿ ಕುಡಿದು ಮೂವರು ಸಾವನ್ನಪ್ಪಿದ ಕುರಿತು ಯಾವುದೇ ದೂರು ದಾಖಲಾಗದ ಕಾರಣ ಈ ಪ್ರಕರಣ ಬೆಳಕಿಗೆ ಬಂದಿಲ್ಲ.
ಆದರೆ ಕಳ್ಳಬಟ್ಟಿ ಸಾರಾಯಿ ಮಾರಾಟ ತಯಾರಿಕೆ ಹಾಗೂ ಮಾರಾಟ ನಿಲ್ಲಿಸುವಂತೆ ಅಲ್ಲಿನ ನಾಗರಿಕರು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗುಬ್ಬಿಚಾಳನ ಮನೆಯೊಂದರಲ್ಲಿ ಮಹಿಳೆ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಇವರೇ ಗ್ರಾಹಕರು: ಕಳ್ಳಬಟ್ಟಿ ಸಾರಾಯಿ ಸೇವಿಸುವ ವ್ಯಕ್ತಿಗಳಲ್ಲಿ ದಿನಕೊಬ್ಬರಾದರೂ ಅಸ್ವಸ್ಥರಾಗುತ್ತಿದ್ದಾರೆ. ಕಳ್ಳಬಟ್ಟಿಗೆ ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳೇ ಗ್ರಾಹಕರು. ಕಟ್ಟಡ ನಿರ್ಮಾಣ, ರಸ್ತೆ ಅಭಿವೃದ್ಧಿ, ಒಳಚರಂಡಿ ದುರಸ್ತಿ ಕೆಲಸದಂತಹ ದೈಹಿಕ ಶ್ರಮದಾಯಕ ಕೆಲಸ ಮಾಡುವವರು ಸೇರಿದಂತೆ ವಿದ್ಯಾರ್ಥಿಗಳು ಕೇವಲ ರು. 20ಗೆ ಸಾಕಾಗುವಷ್ಟು ಸಾರಾಯಿ ದೊರಕುತ್ತಿದೆ ಎಂಬ ಗುಂಗಿನಲ್ಲಿ ಜೀವನವನ್ನೇ ಹಾಳು ಮಾಡುಕೊಳ್ಳುತ್ತಿದ್ದಾರೆ.
ಪೊಲೀಸರೆನೋ ಕಳ್ಳಬಟ್ಟಿ ಮಾರಾಟ, ಅಕ್ರಮ ಗಾಂಜಾ ಮಾರಾಟ ತಡೆಯಲು ಜಾಗೃತಿ ವಹಿಸಿದ್ದೇವೆಂದು ಹೇಳುತ್ತಾರೆ. ಆದರೆ ಗಾಂಜಾ ಮಾರಾಟ, ಕಳ್ಳಬಟ್ಟಿ ಮಾರಾಟ ನಗರದಲ್ಲಿ ಪ್ರತಿದಿನ ಹೆಚ್ಚುತ್ತಲೇ ಸಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಈ ಅಕ್ರಮ ವ್ಯವಹಾರ ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಮುಗ್ಧ ಯುವಕರ ಬದುಕು ವಿಷವರ್ತುಳಕ್ಕೆ ಸಿಲುಕದಂತೆ ಸೂಕ್ತ ಕ್ರಮಗಳನ್ನುಕೈಗೊಳ್ಳುವರೇ?