ಸೀಮೆಎಣ್ಣೆ ಸಬ್ಸಿಡಿ: ಸರ್ಕಾರಕ್ಕೆ ನಾಗರಿಕರ ಮನವಿ
ಧಾರವಾಡ: ಸೀಮೆ ಎಣ್ಣೆಯ ಖರೀದಿಗೆ ಬ್ಯಾಂಕ್ ಮೂಲಕ ಸಬ್ಸಿಡಿ ನೀಡಲು ನಿರ್ಧರಿಸಿರುವ ಸರ್ಕಾರದ ನಿಲುವನ್ನು ವಿರೋಧಿಸಿ ಇಲ್ಲಿಯ ನಾಗರಿಕರು ಶನಿವಾರ ಆಹಾರ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಬಡ ಪಡಿತರ ಚೀಟಿದಾರರಿಗೆ ಬ್ಯಾಂಕಿನ ಮೂಲಕ ಸಬ್ಸಿಡಿ ನೀಡುವುದು ಅವೈಜ್ಞಾನಿಕವಾಗಿದ್ದು, ಸದ್ಯ ಗ್ಯಾಸ್ ಸಿಲೆಂಡರ ಸಬ್ಸಿಡಿಯನ್ನು ಬ್ಯಾಂಕ್ ಮೂಲಕ ಪಡೆಯಲು ಪರದಾಡುತ್ತಿರುವ ಸಂದರ್ಭದಲ್ಲಿ, ಸೀಮೆ ಎಣ್ಣೆಯ ಸಬ್ಸಿಡಿಗಾಗಿ ಬ್ಯಾಂಕ್ಗೆ ಹೋಗುವುದು ಮತ್ತಷ್ಟು ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸೀಮೆ ಎಣ್ಣೆ ಬಳಸುವವರು ತೀರಾ ಬಡವರ್ಗದ ಜನ. ಬ್ಯಾಂಕ್ಗೆ ತೆರಳಿ ವ್ಯವಹಾರ ಮಾಡುವಷ್ಟು ಜ್ಞಾನ ಹೊಂದಿರುವುದಿಲ್ಲ. ಆದ್ದರಿಂದ ಸರ್ಕಾರ ಈ ವಿಷಯವನ್ನು ಮತ್ತೊಮ್ಮೆ ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದೂ ಒತ್ತಾಯಿಸಲಾಯಿತು.
ಸೀಮೆಎಣ್ಣೆ ಖರೀದಿಗೆ ಸಂಬಂಧಿಸಿದಂತೆ ಹಿಂದೆ ಜಾರಿಯಲ್ಲಿದ್ದ ದರವನ್ನೇ ಮುಂದುವರೆಸಬೇಕು. ಅಲ್ಲದೆ ಸರ್ಕಾರ ಹೊಸ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದ ಮನವಿಯನ್ನು ಉಪ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ರಾಘವೇಂದ್ರ ರಾಮದುರ್ಗ, ಮೋಹನ ರಾಮದುರ್ಗ, ಅಪ್ಪಣ್ಣ ಅಲವಂಡಿಮಠ, ಶಿವರುದ್ರ ಬಡಿಗೇರ, ಪಿಳ್ಳೆ, ದುಮ್ಮಾಳ, ಇಮಾಂಬಿ ಶಿಬಾರಗಟ್ಟಿ, ಫಾತೀಮ ಸರುವರಿ, ಕೊಟಗರ, ದಾದುಬಿ ದುದನ್ನವರ ಇದ್ದರು.