ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪುಷ್ಪಾ ಚವ್ಹಾಣ ಇನ್ನೂ ಪ್ರಜ್ಞಾಹೀನ

Lingaraj Badiger
Updated On : 5 May 2014, 11:41 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 4
ಮಾಜಿ ಸಚಿವ ಕತ್ತಿ ಪತ್ನಿ ಅವರ ಕಾರಿಗೆ ಸಿಲುಕಿ ಗಾಯಗೊಂಡು ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದ ಪುಷ್ಟಾ ಚವ್ಹಾಣ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.
ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಬಾಲಾಜಿ ನರವಿಜ್ಞಾನ ಮತ್ತು ಅಪಘಾತ ಚಿಕಿತ್ಸಾ ಕೇಂದ್ರದ ಅಧ್ಯಕ್ಷ ಡಾ. ಕ್ರಾಂತಿ ಕಿರಣ್, ಪುಷ್ಪಾ ಅವರ ಆರೋಗ್ಯ ಸ್ಥಿತಿ ಇನ್ನೂ ಕ್ಲಿಷ್ಟಕರವಾಗಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ. ಔಷಧ ನೀಡುತ್ತಿರುವ ಕಾರಣ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬಂದಿದೆ ಎಂದು ಹೇಳಿದ್ದಾರೆ.
ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ ಎನ್.ಎಂ. ಅಂಗಡಿ ಭಾನುವಾರ ಬಾಲಾಜಿ ನರವಿಜ್ಞಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುಷ್ಪಾ ಅವರನ್ನು ಭೇಟಿಯಾಗಿ ಆರೋಗ್ಯದ ಕುರಿತು ವಿಚಾರಿಸಿದ್ದಾರೆ.
ಏತನ್ಮಧ್ಯೆ ತಮ್ಮ ವಾಹನದಿಂದ ಆಪಘಾತಕ್ಕೆ ಒಳಗಾದ ಪುಷ್ಪಾ ಅವರನ್ನು ಕಿಮ್ಸ್‌ಗೆ ದಾಖಲಿಸಿ ಕೈತೊಳೆದುಕೊಂಡಿದ್ದ ಮಾಜಿ ಸಚಿವ ಉಮೇಶ ಕತ್ತಿ ಅವರ ಪತ್ನಿ ಶೀಲಾ ಕತ್ತಿ ಅವರು ರೋಗಿಯ ಕುರಿತು ಅನಂತರ ಯಾವುದೇ ಕಾಳಜಿ ತೋರಿಸಿಲ್ಲ ಎಂದು ಪುಷ್ಪಾ ಕುಟುಂಬದ ಸದಸ್ಯರು ಆರೋಪಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಉಮೇಶ ಕತ್ತಿ ಆಪ್ತಸಹಾಯಕ ಮಹಾದೇವಪ್ಪ ಭಾನುವಾರ ಬಾಲಾಜಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ತೀವ್ರ ನಿಗಾ ಘಟಕದಲ್ಲಿರುವ ಪುಷ್ಪಾ ಅವರನ್ನು ನೋಡಿಕೊಂಡು ಹೊರಬರುತ್ತಿದ್ದ ಆಪ್ತ ಸಹಾಯಕ ಮಹಾದೇವಪ್ಪ ಅವರನ್ನು ಘೇರಾವ್ ಹಾಕಿದ ಚವ್ಹಾಣ ಕುಟುಂಬದ ಸದಸ್ಯರು ಇಲ್ಲಿಯವರೆಗೆ ಮಾಜಿ ಸಚಿವರು ಬಂದು ಆರೋಗ್ಯ ವಿಚಾರಿಸಿಲ್ಲ. ಕೈಯಲ್ಲಿ ಹಣವಿಲ್ಲದಿದ್ದರೂ ಅವರಿವರಿಂದ ಬೇಡಿ ಮಾತ್ರೆ, ಇಂಜೆಕ್ಷನ್‌ಗಳಿಗೆ ಸಾವಿರಾರು ರುಪಾಯಿ ವೆಚ್ಚ ಮಾಡಿದ್ದೇವೆ ಎಂದರು.
ಕುಟುಂಬದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಕತ್ತಿ ಅವರ ಆಪ್ತಸಹಾಯಕ ಮಹಾದೇವಪ್ಪ, ಪುಷ್ಪಾಳ ಆರೋಗ್ಯ ಸ್ಥಿತಿ ಸುಧಾರಿಸುವವರೆಗೆ ಆಸ್ಪತ್ರೆಯ ಎಲ್ಲ ವೆಚ್ಚಗಳನ್ನು ನಾವೇ ಭರಿಸುತ್ತೇವೆ. ಈಗಾಗಲೇ ರು. 36 ಸಾವಿರ ನೀಡಿದ್ದೇವೆ. ಇನ್ನು ಮುಂದೆ ಆಸ್ಪತ್ರೆಯವರು ಔಷಧಕ್ಕಾಗಿ ನಿಮ್ಮಲ್ಲಿ ಹಣ ಕೇಳುವುದಿಲ್ಲ ಎಂದು ಭರವಸೆ ನೀಡಿದರು.
ಹಣ ನೀಡಿದ ಡಿಎಚ್‌ಒ: ನಾನು ಈ ಹಿಂದೆ ಬೆಳಗಾವಿಯಲ್ಲಿ ಕೆಲಸ ಮಾಡುತ್ತಿದ್ದೆ. ಹೀಗಾಗಿ ಉಮೇಶ ಕತ್ತಿಯವರೊಂದಿಗೆ ನನ್ನ ಸಂಬಂಧ ಹಳೆಯದು, ಈ ರೀತಿ ಘಟನೆ ನಡೆದಿದೆ ಎಂದು ಕತ್ತಿ ಅವರು ತಿಳಿಸಿದ ತಕ್ಷಣ ನನ್ನ ಜೇಬಿನಲ್ಲಿದ್ದ ಹಣವನ್ನ್ನು ಪುಷ್ಪಾ ಸಂಬಂಧಿಕರಿಗೆ ನೀಡಿದ್ದೇನೆಂದು ಜಿಲ್ಲಾ ವೈದ್ಯಾಧಿಕಾರಿ ಎನ್.ಎಂ. ಅಂಗಡಿ ಹೇಳಿದರು.
ತಮ್ಮ ಸ್ವಂತ ಹಣವನ್ನ್ನು ನೀಡಿದ ಬಗ್ಗೆ ಕೇಳಿದ ಪ್ರಶ್ನ್ನೆಗೆ, ಜನ ಪ್ರತಿನಿಧಿಗಳು ಕೇಳಿದಾಗ ಹಣ ನೀಡಬಹುದು, ನಾನು ಮಾನವೀಯ ದೃಷ್ಟಿಯಿಂದ ಹಣ ನೀಡಿದ್ದೇನೆ ಎಂದುತ್ತರಿಸಿದರು.

ಮಾಧ್ಯಮದವರ ಮುಂದೆಹೇಳಿಕೆ ಬೇಡ: ಮಹಾದೇವಪ್ಪ
ಭಾನುವಾರ ಆಸ್ಪತ್ರೆಗೆ ಜಿಲ್ಲಾ ವೈದ್ಯಾಧಿಕಾರಿ ಎನ್.ಎಂ. ಅಂಗಡಿಯೊಂದಿಗೆ ಭೇಟಿ ನೀಡಿದ್ದ ಕತ್ತಿ ಆಪ್ತ ಸಹಾಯಕ ಮಹಾದೇವಪ್ಪ, ಪುಷ್ಪಾಳ ಪತಿ ಮಂಜುನಾಥ ಹಾಗೂ ಮಾವ ಅವರಿಗೆ ಮಾಜಿ ಸಚಿವ ಉಮೇಶ ಕತ್ತಿ ಅವರು ಚಿಕಿತ್ಸೆಗೆ ಹಣ ನೀಡಲಿಲ್ಲ ಎಂದ್ನು ಮಾಧ್ಯಮದವರಿಗೆ ಹೇಳಿಕೆ ನೀಡಬೇಡಿ, ಇದರಿಂದ ಜನರಿಗೆ ಬೇರೆ ಸಂದೇಶ  ಹೋಗುತ್ತದೆ. ಪುಷ್ಪಾಳ ಸಂಪೂರ್ಣ ವೆಚ್ಚವನ್ನ್ನು ಸಾಹೇಬರು ಭರಿಸುತ್ತಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಮುತ್ತಣ್ಣ ಸವರಗೋಳ ಇದ್ದರು.

ನೀಲಪ್ಪ ರಾಜಪ್ಪ ಬಳ್ಳಾರಿ ನಿಧನ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಸಹದೇವ ನಗರ ನಿವಾಸಿ ಮತ್ತು ಸಿದ್ಧಾರೂಢ ಮಠದ ಸೇವಕರಾಗಿದ್ದ ನೀಲಪ್ಪ ರಾಜಪ್ಪ ಬಳ್ಳಾರಿ (76) ಭಾನುವಾರ ನಿಧನರಾದರು. ದಿವಂಗತರ ಅಂತ್ಯಕ್ರಿಯೆ ಹೆಗ್ಗೇರಿ ರುದ್ರಭೂಮಿಯಲ್ಲಿ ಜರುಗಿತು. ದಿವಂಗತ ನೀಲಪ್ಪ ಅವರಿಗೆ ಅಪಾರ ಬಂಧುಬಳಗವಿದೆ.

ನಾಯಿ ಕಚ್ಚಿ ಬಾಲಕನಿಗೆ ಗಾಯ
ಕಲಘಟಗಿ: ತಾಲೂಕಿನ ಗಳಗಿ ಹುಲಕೊಪ್ಪದಲ್ಲಿ ಶುಕ್ರವಾರ ರಾತ್ರಿ ಹುಚ್ಚು ಹಿಡಿದ ನಾಯಿಯೊಂದು ಮನೆಯಲ್ಲಿ ಮಲಗಿದ್ದ ಒಂಬತ್ತು ವರ್ಷದ ಬಾಲಕನಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ದ್ಯಾಮಣ್ಣ ಬಸಪ್ಪ ಬೂದಿ ಎಂಬ ನಾಯಿಕಡಿತಕ್ಕೊಳಗಾಗಿದ್ದಾನೆ. ಇದಲ್ಲದೆ, ಈ ಹುಚ್ಚು ಹಿಡಿದ ನಾಯಿ ಎರಡು ಆಕಳು ಹಾಗೂ ನಾಲ್ಕು ಮಕ್ಕಳಿಗೂ ಕಚ್ಚಿಗಾಯಗೊಳಿಸಿದೆ ಎಂದು ಗೊತ್ತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement