ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕನ್ನಡ ಹತ್ತಿಕ್ಕುವ ಯತ್ನ ವಿಫಲಗೊಳಿಸೋಣ

Rashmi Kasaragodu
Updated On : 6 May 2014, 12:49 pm

ಹುಬ್ಬಳ್ಳಿ: ಕನ್ನಡದ ಕೂಗಿಗೆ ದಿಲ್ಲಿ ಮಟ್ಟದಲ್ಲಿ ಬೆಲೆ ಬರುತ್ತಿಲ್ಲ. ತಮಿಳು, ತೆಲುಗು, ಹಿಂದಿ ಭಾಷೆಗಳು ಕನ್ನಡವನ್ನು ತಿವಿಯುತ್ತಿವೆ ಎಂದು ಧಾರವಾಡ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಶಿವಾನಂದ ಗಾಳಿ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಲಿಂಗರಾಜ ಸಮುದಾಯ ಭವನದಲ್ಲಿ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೋಮವಾರ ಆಯೋಜಿಸಿದ್ದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ತಮಿಳು, ಬಂಗಾಳಿ, ತೆಲುಗು, ಹಿಂದಿ ಭಾಷೆಗಳು ಶಕ್ತಿಗಳಾಗಿ ಬೆಳೆದು ನಿಂತಿವೆ. ಇವುಗಳ ನಡುವೆ ಕನ್ನಡ ಈಗಲೂ ನಿಃಶಕ್ತವೇ ಆಗಿದೆ ಎಂದರು.
ತಮಿಳಿನಂಥ ಭಾಷೆಗಳಿಗೆ ಸರ್ಕಾರವನ್ನೇ ಬಗ್ಗಿಸುವ ಶಕ್ತಿ ಇದೆ. ಅಲ್ಲಿನ ಜನ ತಮ್ಮ ಭಾಷೆಯನ್ನು ಅಷ್ಟರ ಮಟ್ಟಿಗೆ ಅಪ್ಪಿಕೊಂಡಿದ್ದಾರೆ. ನಮ್ಮಲ್ಲಿ ಹಾಗಾಗಿಲ್ಲ, ಅನ್ಯರಿಗೆ ತಿಳಿಯುವುದಿಲ್ಲವೆಂದರೆ ನಾವು ಸಲೀಸಾಗಿ ಇಂಗ್ಲಿಷಿಗೆ ಜಾರಿ ಬಿಡುತ್ತೇವೆ. ಹಾಗಾಗಬಾರದು. ಅನ್ಯರನ್ನೇ ಕನ್ನಡದ ಕೊಳಕ್ಕೆ ಎಳೆದುಕೊಳ್ಳಬೇಕು. ಇಲ್ಲಿ ಈಸಲು ಕಲಿಸಿದಾಗ ಕನ್ನಡ ಶಕ್ತಿಯಾಗಿ ಬೆಳೆಯುವುದು ಎಂದರು.
ಕನ್ನಡವನ್ನು ಶಕ್ತಿಯಾಗಿಸುವಲ್ಲಿ ಧಾರವಾಡ ಸಾಕಷ್ಟು ಶ್ರಮಿಸಿದೆ. ಗೋಕಾಕ್ ಚಳವಳಿಗೆ ಬಿರುಸು ಬಂದದ್ದೇ ಧಾರವಾಡ ಪರಿಸರದಿಂದ. ನಿಜಾಂ ರಾಜ್ಯಕ್ಕೆ ಸೇರಿದ ಕನ್ನಡ ಜಿಲ್ಲೆಗಳ ಜನ ಕನ್ನಡವನ್ನುಳಿಸಲು ಅದೆಷ್ಟು ಹೆಣಿಗಿದರೆಂಬುದನ್ನು ಸ್ಮರಿಸಬೇಕು. ಕನ್ನಡ ತುಳಿಯುವವರಿಗೆ ಅವಕಾಶ ಕೊಡಬಾರದು. ನಮ್ಮ, ಅಕ್ಕಪಕ್ಕದ ಜಿಲ್ಲೆಗಳ ಮಟ್ಟಿಗಾದರೂ ಇದಕ್ಕೆ ಅವಕಾಶ ಕೊಡದಂತೆ ನಾವು ಸಂಘಟಿತರಾಗಬೇಕಿದೆ. ಸಾಹಿತ್ಯ ಸಂಸ್ಕೃತಿಯ ಪ್ರತಿಬಿಂಬವಷ್ಟೇ ಅಲ್ಲ, ಗತಿ ಬಿಂಬವೂ ಹೌದು. ನಮ್ಮ ಸಂಸ್ಕೃತಿಗೆ ಉಜ್ವಲ ಶೋಭೆ ಕೊಡುವ, ನೊಂದ ಮನಸ್ಸನ್ನು ಸಂತೈಸುವ, ಸುಂದರ ವಸ್ತು ಸಾಹಿತ್ಯ. ಇದರ ಗೀಳು ಬೆಳೆಸಿಕೊಳ್ಳಿ ಎಂದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ, ವಿಜಾಪುರ ಮಹಿಳಾ ವಿವಿ ಮುಖ್ಯಸ್ಥೆ ಪ್ರೊ. ವಿಜಯಾದೇವಿ, ಡಾ. ಗುರುಲಿಂಗ ಕಾಪಸೆ, ಡಾ. ಸರೋಜಿನಿ ಶಿಂತ್ರಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿ, ಡಾ. ವೈ.ಎಂ. ಭಜಂತ್ರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement