ಜೆಡಿಎಸ್ ಅಭ್ಯರ್ಥಿ ಘೋಷಣೆ ಅಧಿಕೃತವಲ್ಲ: ಶಿವಶಂಕರ
ಅಣ್ಣಿಗೇರಿ: ವಿಧಾನಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ವಸಂತ ಹೊರಟ್ಟಿ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದ ಕ್ರಮ ಅಸಂವಿಧಾನಿಕ. ಹೀಗೆ ಘೋಷಿಸಲು ಶಾಸಕ ಬಸವರಾಜ ಹೊರಟ್ಟಿ ಬೆಂಬಲಿಗರ ಸಭೆಗೆ ಅಧಿಕಾರವಿಲ್ಲ ಎಂದು ಜೆಡಿಎಸ್ ಕಾರ್ಯಕರ್ತ, ಮಾಜಿ ಸಿನೆಟ್ ಸದಸ್ಯ ಶಿವಶಂಕರ ಕಲ್ಲೂರ ಆಕ್ಷೇಪಿಸಿದ್ದಾರೆ. ವಸಂತ ಮೂಲತಃ ಜೆಡಿಎಸ್ ಕಾರ್ಯಕರ್ತರಲ್ಲ. ಬಸವರಾಜ ಹೊರಟ್ಟಿ ಪಕ್ಷದ ಅಧ್ಯಕ್ಷರಲ್ಲ. ಇದು ಪಕ್ಷದ ಅಧಿಕೃತ ಸಭೆ ಅಲ್ಲ. ಈ ರೀತಿ ತೀರ್ಮಾನ ತೆಗೆದುಕೊಳ್ಳಲು ಅವರಿಗೆ ಯಾವ ಹಕ್ಕೂ ಇಲ್ಲ. ಕ್ಷೇತ್ರದ ವಿವಿಧ ಸಂಘಟನೆಗಳ ಪಕ್ಷಾತೀತ ಸಭೆ. ಅದೇ ಸಭೆಯಿಂದ ಜೆಡಿಎಸ್ ಅಭ್ಯರ್ಥಿ ವಸಂತ ಹೊರಟ್ಟಿ ಎಂದು ಘೋಷಿಸಲಾಗುತ್ತದೆ. ಇದು ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಪದವೀಧರರಿಗೆ ತಪ್ಪು ಹಾದಿ ತೋರಿದಂತೆ. ಇದು ಬಸವರಾಜ ಹೊರಟ್ಟಿ ಬೆಂಬಲಿಗರ, ಅಭಿಮಾನಿಗಳ ಸಭೆ. ಇವರು ಬೆಂಬಲಿಸಿದಾಕ್ಷಣ ವಸಂತ ಜೆಡಿಎಸ್ ಅಭ್ಯರ್ಥಿಯಾಗಲ್ಲ. ತಮ್ಮನ್ನ್ನೂ ಒಳಗೊಂಡಂತೆ ಕೆಲವರು ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಬಗ್ಗೆ ವರಿಷ್ಠರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಅಲ್ಲಿತನಕ ಯಾರೂ ಜೆಡಿಎಸ್ ಅಭ್ಯರ್ಥಿಗಳಲ್ಲ. ಕೇವಲ ಆಕಾಂಕ್ಷಿಗಳು. ಪಕ್ಷದ ಸಂವಿಧಾನಾತ್ಮಕ ಚೌಕಟ್ಟನ್ನ್ನು ಮೀರಿ ಅಭ್ಯರ್ಥಿ ಘೋಷಿಸುವುದು ಸರಿಯೇ ಎಂದು ಬಸವರಾಜ ಹೊರಟ್ಟಿ, ಶಾಸಕ ಎನ್.ಎಚ್.ಕೋನರಡ್ಡಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಲ್ಲೂರು ತಿಳಿಸಿದ್ದಾರೆ