ವಿಕೃತಿಗೆ ಕವಿಗೋಷ್ಠಿ ಛಾಟಿ
ಹುಬ್ಬಳ್ಳಿ: ಹೆಣ್ಣು ಭ್ರೂಣ ಹತ್ಯೆ.. ಮಹಿಳೆಯ ಕಷ್ಟ.. ಮುಳ್ಳು ತುಳಿದಾಗ ಪಡುವ ಸಂಕಟ.. ಭ್ರಷ್ಟಾಚಾರ...
ಇಂಥ ಹಲವಾರು ವಿಭಿನ್ನ ವಿಷಯಗಳನ್ನು ಹೊಂದಿರುವ ಕವನಗಳು 'ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ವರ್ಷ'ದ ಅಂಗವಾಗಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಧಾರವಾಡ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕೇಳಿಬಂದವು.
'ಕನ್ನಡವ್ವೆ ಓ ಕನ್ನಡವ್ವೆ
ನನ್ನ ಹೆತ್ತ ತಾಯಿ ನೀನಲ್ಲವೇ?
ನಾನು ನಿನ್ನ ಬಸಿರು
ನೀ ನನ್ನ ಉಸಿರು...' ಎಂದು ಹುಬ್ಬಳ್ಳಿಯ ವೆಂಕಟೇಶ ಮರೆಗುದ್ದಿ ತಮ್ಮ ಕವನ ವಾಚನದಲ್ಲಿ ಕನ್ನಡ ಬಗೆಗಿನ ಅಭಿಮಾನ ವ್ಯಕ್ತಪಡಿಸಿದರು. ಹೆಗ್ಗಣಗಳು ಶೀರ್ಷಿಕೆಯಡಿ ಕವನ ವಾಚಿಸಿದ ಮಗ್ಗೇರಾಜಿಗೌಡ, 'ಹೆಗ್ಗಣಗಳು ನುಗ್ಗತಾವೆ ನೋಡಿ ಸಾರ್ವಜನಿಕ ಸಂಪತ್ತಿಗೆ...' ಮೂಲಕ ಸಾರ್ವಜನಿಕ ಆಸ್ತಿ ಕಬಳಿಸುವ ಸಂಸ್ಥೆಗಳ ಮೇಲೆ ಬೆಳಕು ಚೆಲ್ಲಿದರು.
ಇದಕ್ಕೂ ಮೊದಲು ಪಯಣ ಶೀರ್ಷಿಕೆ ಮೂಲಕ 'ನಡೆದು ನಡೆದು ಹಾದಿಯಾಗಿ, ಹಾದಿ ಬೀದಿಯಾಗಿ, ಬೀದಿ ರಾಜಮಾರ್ಗವಾಗಿ...' ಎಂದು ಜಗದೀಶ ಮಂಗಳೂರಮಠ ಹಳ್ಳಿಯ ಬೀದಿಗಳು ಪಟ್ಟಣದ ರಾಜಮಾರ್ಗಗಗಳಾಗಿ ಬದಲಾದ ಪರಿಯನ್ನು ತಮ್ಮ ಕವನದಲ್ಲಿ ವ್ಯಕ್ತಪಡಿಸಿದರು.
ಉತ್ತರಾಖಂಡದಲ್ಲಿ ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಆಗಿದ್ದ ಅನಾಹುತವನ್ನು ತಮ್ಮ ಕವನದ ಮೂಲಕ ಬಿಚ್ಚಿಟ್ಟಿದ್ದು ಡಾ. ಮಹೇಶ ಹೊರಕೇರಿ. ಜಲಪ್ರಳಯದಿಂದ ಸಾವನ್ನಪ್ಪಿದ್ದ ಜನ, ಜಾನುವಾರು, ಹಾನಿಗೀಡಾದ ಆಸ್ತಿಯ ಬಗ್ಗೆ ಕಣ್ಣಿಗೆ ಕಟ್ಟುವಂತೆ ಕವನದ ಸಾಲುಗಳನ್ನು ಕಟ್ಟಿದ್ದರು ಹೊರಕೇರಿ.
ಸಾಹಿತ್ಯದ ತವರೂರು ಧಾರವಾಡದ ಸೊಬಗು ವ್ಯಕ್ತಗೊಂಡಿದ್ದು ಕುಂದಗೋಳದ ಎಸ್.ಎನ್. ಮುಗಳಿ ಅವರ ಕವನದಲ್ಲಿ.
ಬರಬೇಡ ಗಾಂಧಿ ತಾತ ನೀ... ಎಂದು ಹಾಡುವ ಮೂಲಕ ಇಂದಿನ ಭ್ರಷ್ಟಾಚಾರ, ಅಧಿಕಾರ ದಾಹದ ಬಗ್ಗೆ ಖೇದ ವ್ಯಕಪಡಿಸಿದ್ದು ಕಲಘಟಗಿಯ ಗಾಯತ್ರಿ ರವಿ. 'ಬರಬೇಡ ಗಾಂಧಿ ತಾತ ನೀ, ಕೈಹಿಡಿದು ಕರೆದರೂ ಇಲ್ಲಿಗೆ, ನೀ ತಂದ ಸ್ವಾತಂತ್ರ್ಯ ಅತಂತ್ರವಾಗಿದೆ...' ಎಂಬ ಕವನ ಇಂದಿನ ಭ್ರಷ್ಟ ಸಮಾಜಕ್ಕೆ ಹಿಡಿದ ಕನ್ನಡಿಯಂತಿತ್ತು.
ಇಂದಿನ ಕಾಲದಲ್ಲಿ ಝಣಝಣ ಕಾಂಚಾಣವಿಲ್ಲದೆ ಯಾವುದೇ ಕೆಲಸವಾಗದೆಂಬ ಕಟುಸತ್ಯ ಬಹಿರಂಗಗೊಂಡಿದ್ದು ಧಾರವಾಡದ ಶಿವಕುಮಾರ ಜಮದಂಡಿ ಅವರ ಕವಿತೆಯಲ್ಲಿ.
ನವಲಗುಂದದ ಅಂಧ ಕವಿಯತ್ರಿ ಶೋಭಾ ಜಕ್ಕನಗೌಡರ 'ವಸಂತ ಬಂದ ನೋಡು, ತಂದ ಕೋಗಿಲೆಯ ಹಾಡು..' ಕವನದ ಮೂಲಕ ವಸಂತ ವೈಭವ ಬಣ್ಣಸಿದರು. ಧಾರವಾಡದ ರಾಮಚಂದ್ರ ಕುಲಕರ್ಣಿ, ರಾಜೇಶ್ವರಿ ಕೋಲಕಾರ, ರಮೇಶ ಭಜಂತ್ರಿ, ಶ್ರೀನಿವಾಸ ನವೀಂದ್ರಕರ್, ಅನಿತಾ ಗುಡಿ, ಹುಬ್ಬಳ್ಳಿಯ ಕೆ.ಎ. ದೊಡ್ಡಮನಿ, ಕುಂದಗೋಳದ ಎಸ್.ಎನ್. ಮುಗಳಿ, ಕಲಘಟಗಿಯ ವೈ.ಜಿ. ಭಗವತಿ, ಎಂ.ಎಂ. ಪುರದನಗೌಡ್ರ, ನವಲಗುಂದದ ಸದಾಶಿವ ಪಾಟೀಲ ಕವನ ವಾಚಿಸಿದರು.
ಆಶಯ ಭಾಷಣ ಮಾಡಿದ ಕವಿ ಡಾ. ಎಂ.ಡಿ. ವಕ್ಕುಂದ, ಜಾಗತೀಕರಣ ಎಲ್ಲ ಭಾಷೆಗಳ ಸಾಹಿತ್ಯದ ಮೇಲೆ ಪರಿಣಾಮ ಬೀರಿದೆ. ಕನ್ನಡದ ಸಾಹಿತ್ಯ ಜಾಗತೀಕರಣದ ಬೇರುಗಳನ್ನು ಸೆರೆಹಿಡಿದಿದೆ. ಕನ್ನಡದ ಕವನಗಳಲ್ಲಿ ಜಾಗತೀಕರಣದ ವೈಭವ ಸುಂದರವಾಗಿ ಬಣ್ಣಿಸಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಇತಿಹಾಸ ವಿಭಾಗದ ಸಹಪ್ರಾಧ್ಯಾಪಕ ಪ್ರೊ. ಅಶೋಕ ಶೆಟ್ಟರ್ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಗೆ ಧಾರವಾಡ ಜಿಲ್ಲೆಯ ಕೊಡುಗೆ ಅದ್ಭುತ ಎಂದರು. ಸೈದ್ಧಾಂತಿಕ ಚೌಕಟ್ಟಿನಲ್ಲಿ ಸಾಹಿತ್ಯದ ಬೇರೆ ಬೇರೆ ಮಜಲುಗಳನ್ನು ಕಂಡಿದ್ದರೂ ರೂಪ ಮಾತ್ರ ಒಂದೇ. ನವೋದಯ ಸಾಹಿತ್ಯ, ದಲಿತ ಸಾಹಿತ್ಯ ಮತ್ತಿತರ ವಿಭಿನ್ನತೆ ಸಾಹಿತ್ಯದಲ್ಲಿದ್ದರೂ ನಾಡು, ನುಡಿಯ ಬಗ್ಗೆ ಏಕತೆ ವ್ಯಕ್ತವಾಗುತ್ತದೆ ಎಂದರು. ಡಾ. ಶಿವಾನಂದ ಗಾಳಿ, ಡಾ. ಲಿಂಗರಾಜ ಅಂಗಡಿ ಇದ್ದರು. ಸುನಂದಾ ಕಡಮೆ ಸ್ವಾಗತಿಸಿದರು. ಮಹಾಂತಪ್ಪ ನಂದೂರ, ಎಂ.ಬಿ. ಪವಾಡಶೆಟ್ಟರ್ ನಿರೂಪಿಸಿದರು. ಲಿಂಗರಾಜ ಕಮತ ವಂದಿಸಿದರು.
ಬಂದ್ ಮಧ್ಯೆಯೂ ಜನ
ಹುಬ್ಬಳ್ಳಿ ಬಂದ್ ಕರೆಯ ಮಧ್ಯೆಯೂ ಸಮ್ಮೇಳನ ಯಶಸ್ಸು ಕಂಡಿತು. ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ತಬ್ಧಗೊಂಡಿದ್ದರ ಪರಿಣಾಮ ಹಲವು ಜಿಲ್ಲೆಗಳಿಂದ ಬರುವ ಸಾಹಿತ್ಯಾಸಕ್ತರು ತೊಂದರೆ ಅನುಭವಿಸುವಂತಾಯಿತು. ಆದಾಗ್ಯೂ ಸಮ್ಮೇಳನ ಉದ್ಘಾಟನೆಗೊಳ್ಳುವ ಕಾಲಕ್ಕೆ ಸಮುದಾಯ ಭವನ ಭರ್ತಿಯಾಗಿತ್ತು. ಸಂಜೆ ಹೊತ್ತಿನ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜನ ಜಂಗುಳಿ ಸೇರಿತ್ತು. ಪುಸ್ತಕಗಳು, ಖಾದಿ ಬಟ್ಟೆಗಳ ಖರೀದಿ ಜೋರಾಗಿತ್ತು. ಊಟೋಪಹಾರ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.