ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕವಿವಿ ಲೆಕ್ಕ ಪರಿಶೋಧಕರಹೆಸರಲ್ಲೇ ಗೋಲ್‌ಮಾಲ್

Mainashree
Updated On : 7 May 2014, 9:54 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 6
ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ 'ಲೆಕ್ಕಾಚಾರ' ಸರಿಯಿಲ್ಲ ಎನ್ನುವುದು ಈ ಹಿಂದೆ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ಕೆಯುಡಿ ಆಡಿಟರ್ ಹೆಸರಲ್ಲಿ ಯೋಜನಾ ಮತ್ತು ಅಭಿವೃದ್ಧಿ ಅಧಿಕಾರಿಗಳು 'ಸ್ವಾಹಾ' ಮಾಡಿರುವ ಮತ್ತೊಂದು ಗೋಲ್‌ಮಾಲ್ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಸ್ವತಃ ವಿಶ್ವ ವಿದ್ಯಾಲಯದ ಲೆಕ್ಕ ಪರಿಶೋಧಕರಾದ ಎಂ.ಪಿ. ಅನಿತಾ, ಯೋಜನಾ ಮತ್ತು ಅಭಿವೃದ್ಧಿ ಅಧಿಕಾರಿಗಳು ಮಾಡಿರುವ ಪ್ರಮಾದದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರಲ್ಲದೆ, ತಪ್ಪೆಸಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ವಿವಿ ಕುಲಸಚಿವರಿಗೆ ಬರೆದಿರುವ ಪತ್ರ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.
ಏನಿದು ಪ್ರಕರಣ?: 30 ಮೇ 2011ರಿಂದ ಜೂನ್ 1ರ ವರೆಗೆ ನವದೆಹಲಿಯ ಯುಜಿಸಿ ಸಮಿತಿಯೊಂದು ವಿಶ್ವ ವಿದ್ಯಾಲಯಕ್ಕೆ ಬಂದಿತ್ತು. ಅವರ ಆದರಾತಿಥ್ಯಕ್ಕಾಗಿ ವಿವಿಯ ಯೋಜನಾ ಮತ್ತು ಅಭಿವೃದ್ಧಿ ಅಧಿಕಾರಿ ಎಸ್.ಟಿ. ಬಾಗಲಕೋಟಿ ಅವರಿಗೆ 20 ಮೇ 2011ರಂದು ರು.18.70 ಲಕ್ಷ (ಲೆಕ್ಕ ಶೀರ್ಷಿಕೆ 1471) ಮುಂಗಡ ಮಂಜೂರಿ ಮಾಡಿ ಪಾವತಿಸಲಾಗಿತ್ತು. ಈ ಮೊತ್ತದಲ್ಲಿ ವೆಚ್ಚ ಭರಿಸಿ ಬಾಕಿ ಉಳಿದ ಮೊತ್ತ ರು.6.24 ಲಕ್ಷವನ್ನು ಎರಡು ತಿಂಗಳ ಬಳಿಕ ಅಂದರೆ 24 ಆಗಸ್ಟ್ 2011ರಂದು ವಿವಿ ನಿಧಿಗೆ ಮರಳಿ ಭರಿಸಲಾಯಿತು. ಆದರೆ ಖರ್ಚು ವೆಚ್ಚದ ಹೊಂದಾಣಿಕೆ ವೋಚರ್‌ಗಳನ್ನು ಒಂದು ವರ್ಷ ಹತ್ತು ತಿಂಗಳ ನಂತರ ಅಂದರೆ, 14 ಮಾರ್ಚ್ 2013ರಂದು ನೀಡಲಾಯಿತು.
ಈ ಪ್ರಕರಣದಲ್ಲಿ ಗಮನಿಸಬೇಕಾದ ಅಂಶವೆಂದರೆ, ಬಾಕಿ ಉಳಿದ ಮೊತ್ತ ರು.6.24 ಲಕ್ಷ ಎರಡು ತಿಂಗಳ ಬಳಿಕ ಇಟ್ಟುಕೊಂಡಿದ್ದು ಯಾವ ಕಾರಣಕ್ಕಾಗಿ? ಸರ್ಕಾರದ ಹಣ ಯಾವುದೇ ಪೂರ್ವಾನುಮತಿ ಇಲ್ಲದೆ ಇಟ್ಟುಕೊಂಡಿದ್ದು ಅಪರಾಧ. ಜತೆಗೆ ಖರ್ಚು ವೆಚ್ಚದ ವೋಚರ್ ನೀಡಲು ಒಂದು ವರ್ಷ ಹತ್ತು ತಿಂಗಳ ಸಮಯ ತೆಗೆದುಕೊಂಡಿದ್ದಾದರೂ ಏತಕ್ಕೆ? ಎಂಬ ಪ್ರಶ್ನೆ ಉದ್ಭವಿಸಿದೆ. ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಗಮನಾರ್ಹ ಸಂಗತಿಯೆಂದರೆ, ಈ ವೆಚ್ಚದ ವೋಚರ್‌ನಲ್ಲೂ ಗೋಲ್‌ಮಾಲ್ ನಡೆದಿರುವುದು ಕಂಡು ಬಂದಿದೆ. ಸಮಿತಿಯ ಸದಸ್ಯರಿಗಾಗಿ ಧಾರವಾಡದ ರೆಸಾರ್ಟೊಂದರಲ್ಲಿ ಎರಡು ಕೊಠಡಿಗಳನ್ನು ಕೆಯುಡಿ ಆಡಿಟರ್ ಹೆಸರಿನಲ್ಲಿ ಕಾಯ್ದಿರಿಸಲಾಗಿದೆ ಎಂದು ತೋರಿಸಲಾಗಿದೆ. ಜತೆಗೆ ಸಮಿತಿಯ ಸದಸ್ಯರ ವಾಸ್ತವ್ಯಕ್ಕಾಗಿ ರು.77 ಸಾವಿರ ವೆಚ್ಚ ಮಾಡಿರುವುದಾಗಿ ಬಿಲ್ ತೋರಿಸಲಾಗಿದೆ. ಸ್ವತಃ ಕೆಯುಡಿ ಆಡಿಟರ್ ಆಗಿರುವ ಅನಿತಾ, ತಮ್ಮ ಕಚೇರಿಗೆ ಸಂಬಂಧವೇ ಇಲ್ಲದ ವಿಷಯದಲ್ಲಿ ಈ ವೆಚ್ಚ ಭರಿಸಲಾಗಿದೆ ಎಂದು ಅಸಮಾಧಾನ ತೋಡಿಕೊಂಡಿದ್ದು, ವಿಚಾರಣಾ ಪತ್ರವನ್ನೂ ಬರೆದಿದ್ದಾರೆ. ಆದರೆ ಈ ಬಗ್ಗೆ ಉತ್ತರ ನೀಡಲಾಗಿಲ್ಲ. ಪುನರ್ ಪರಿಶೀಲನಾ ಸಮಯದಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ಹಣಕಾಸು ಶಾಖೆ ತನಗೇನೂ ಗೊತ್ತಿಲ್ಲ ಎನ್ನುವಂತೆ ವರ್ತಿಸಿದೆ.
ಹೊಂದಾಣಿಕೆ ವೆಚ್ಚದ ಬಿಲ್ಲುಗಳನ್ನು ಯಾವುದೇ ಪರಿಶೀಲನೆಯಿಲ್ಲದೆ ಅಂಗೀಕರಿಸಿರುವುದು ಮತ್ತು ನೀಡಲಾಗುವ ವಿಚಾರಣಾ ಪತ್ರಗಳನ್ನೂ ನೋಡಿಲಾಗಿಲ್ಲ ಎಂಬುದು ಸ್ಪಷ್ಟ ಎಂದು ಅನಿತಾ ಕುಲಸಚಿವರಿಗೆ ಬರೆದಿರುವ ಪತ್ರದಲ್ಲಿ ಅಸಮಾಧಾನ ಹೊರಗೆಡವಿದ್ದಾರೆ.
ಆಡಿಟರ್ ಹೆಸರಲ್ಲೇ...: ಅನೇಕ ಪ್ರಕರಣಗಳಲ್ಲಿ ಯಾರದ್ದೋ ಹೆಸರಲ್ಲಿ ಬಿಲ್ ಹಾಕಿ ಅಪರಾತಪರಾ ಮಾಡಿರುವುದು ಕಂಡು ಬರುತ್ತದೆ. ಆದರಿಲ್ಲಿ ಲೆಕ್ಕ ಪರಿಶೋಧನೆ ಮಾಡುವವರ ಹೆಸರಿನಲ್ಲೇ ಅಪರಾತಪರಾ ಮಾಡಿರುವುದು ಬೆಚ್ಚಿ ಬೀಳಿಸುವ ಸಂಗತಿ. ಲೆಕ್ಕ ಪರಿಶೋಧಕರು ಪರಿಶೀಲಿಸಬಹುದು ಎನ್ನುವ ಖಬರ್ ಇದ್ದರೂ ಈ ರೀತಿಯ ಖೊಟ್ಟಿ ಬಿಲ್ಲುಗಳನ್ನು ರಾಜಾರೋಷವಾಗಿ ತಯಾರಿಸಿ ಅಂಗೀಕರಿಸುತ್ತಿರುವುದು ಯೋಜನಾ ಮತ್ತು ಅಭಿವೃದ್ಧಿ ಅಧಿಕಾರಿಗಳು, ಹಣಕಾಸು ಅಧಿಕಾರಿಗಳು ಲೋಪವನ್ನು ಎತ್ತಿ ತೋರಿಸುತ್ತದೆ.
ಕ್ರಮಕ್ಕೆ ಆಗ್ರಹ: ಈ ಗೋಲ್‌ಮಾಲ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿರುವ ಅನಿತಾ, ಪ್ರಕರಣ ಕೂಲಂಕಷವಾಗಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕುಲಸಚಿವರಿಗೆ 10 ಮಾರ್ಚ್ 2014ರಂದು ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. ಕುಲಸಚಿವರ ಕೈಗೆ ಪತ್ರ ಸೇರಿ ತಿಂಗಳಾಗುತ್ತಾ ಬಂದರೂ ಈ ಬಗ್ಗೆ ಕುಲಸಚಿವರು ತಟಸ್ಥ ಧೋರಣೆ ತಾಳಿರುವುದು ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರು ನಡೆದಿದೆ ಎನ್ನುವ ಸಂದೇಹ ವ್ಯಕ್ತವಾಗಿದೆ.

 ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement