ರಾಜ್ಯಾದ್ಯಂತ ಡಿಸಿ ಕಚೇರಿ ಎದುರು ಧರಣಿ 12ಕ್ಕೆ
ಧಾರವಾಡ: ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಟನ್ಗೆ ರು. 2500 ರಂತೆ ಬೆಂಬಲ ಬೆಲೆಯನ್ನು ಹೆಸರಿಗಷ್ಟೇ ಘೋಷಿಸಿದ್ದು, ಕಾರ್ಖಾನೆ ಮಾಲೀಕರು ಸರ್ಕಾರದ ಮಾತಿಗೆ ಗೌರವ ನೀಡದೆ, ರೈತರಿಗೆ ಕೇವಲ ರು. 1800 ರಿಂದ ರು. 2000 ವರೆಗೆ ಮಾತ್ರ ನೀಡಿ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ರೈತರಿಗ ಬರಬೇಕಾದ ಬಾಕಿ ರು. 3500 ಕೂಡಲೇ ಕೊಡಿಸಬೇಕೆಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ ಹೇಳಿದರು.
ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೈತರೊಂದಿಗೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಮೇ 12 ರಂದು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗೆ ರೈತರು ಮುತ್ತಿಗೆ ಹಾಕುತ್ತೇವೆ ಹಾಗೂ ಮೇ 15 ರಂದು ಕಾರ್ಖಾನೆ ಮುತ್ತಿಗೆ ಹಾಕಿ ಹಣ ಕೊಡಿ ಇಲ್ಲವೆ ಸಕ್ಕರೆ ಕೊಡಿ ಎಂದು ಹೋರಾಟ ನಡೆಸುತ್ತೇವೆಂದು ಆಗ್ರಹಿಸಿದರು.
ರಾಜ್ಯದಲ್ಲಿ 60 ಸಕ್ಕರೆ ಕಾರ್ಖಾನೆಗಳಿವೆ. ಈ 60 ಕಾರ್ಖಾನೆಗಳು ರೈತರಿಗೆ ನೀಡಬೇಕಿದ್ದ ಸಂಪೂರ್ಣ ಹಣ ನೀಡುತ್ತಿಲ್ಲ. ಕಾರ್ಖಾನೆಗಳು ಪ್ರಭಾವಿ ನಾಯಕರದ್ದಾಗಿರುವುದರಿಂದ ರೈತರಿಗೆ ಈ ರೀತಿಯ ಅನ್ಯಾಯವಾಗುತ್ತಿದೆ. ಇದರಿಂದಾಗಿ ಸರ್ಕಾರವು ಸಹ ಅವರೊಂದಿಗೆ ಶಾಮೀಲಾಗಿ ರೈತರ ಕಣ್ಣೀರು ಒರೆಸಲು ಮನಸ್ಸು ಮಾಡುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈ ಕಾರ್ಖಾನೆ ಮಾಲೀಕರು ರೈತರಿಗೆ ಬಾಕಿ ನೀಡುವ ಸಲುವಾಗಿ ರು. 1000 ಕ್ಕಿಂತಲೂ ಹೆಚ್ಚು ಹಣ ಬಡ್ಡಿ ರಹಿತವಾಗಿ ಸಾಲ ಪಡೆದಿದ್ದಾರೆ. ಅದರಂತೆ ರು. 100 ತೆರಿಗೆ ಮನ್ನಾಕ್ಕಾಗಿ ಸಹಾಯ ಧನ ಸಹ ಪಡೆದಿದ್ದಾರೆ. ಇಷ್ಟೆಲ್ಲ ಸವಲತ್ತುಗಳನ್ನು ಪಡೆದಿದ್ದರೂ ಸಹ ರೈತರ ಬಗ್ಗೆ ಕಾರ್ಖಾನೆ ಮಾಲೀಕರಿಗಾಗಲಿ, ಸರ್ಕಾರಕ್ಕಾಗಲಿ ಕಾಳಜಿ ಇಲ್ಲ. ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುವ ಸಂದರ್ಭದಲ್ಲಿ ಸಕ್ಕರೆ ಬೆಲೆ ಕ್ವಿಂಟಲ್ಗೆ ರು. 1880 ಇತ್ತು. ಆದರೆ ಸದ್ಯ ಸಕ್ಕರೆ ಬೆಲೆ ರು. 3400 ಆಗಿದೆ. ಕಾರ್ಖಾನೆಗಳು ಶೇ.10 ರಷ್ಟು ಲೇವಿ ಕೊಡಬೇಕಿತ್ತು. ಸರ್ಕಾರ ಇದನ್ನು ರದ್ದು ಮಾಡಿ, ಇವರಿಗೆ ಮುಕ್ತ ಮಾರಾಟಕ್ಕೆ ಅವಕಾಶವನ್ನು ಸಹ ನೀಡಿದೆ. ಪಕ್ಕದ ರಾಜ್ಯಗಳು ರೈತರ ಹಿತಾಸಕ್ತಿಯನ್ನು ಕಾಪಾಡುತ್ತಿವೆ. ತಮಿಳುನಾಡು ಟನ್ ಗೆ ರು. 2600, ಉತ್ತರ ಪ್ರದೇಶ ರು. 2800, ಗುಜರಾತ್ ನಾಮದೇವ ಕಾರ್ಖಾನೆಯು ರು. 3300 ಹಣವನ್ನು ರೈತರಿಗೆ ನೀಡುತ್ತಿವೆ. ಆದರೆ ನಮ್ಮ ಸರ್ಕಾರ ಕೇವಲ ರೈತರಿಗೆ ಭರವಸೆಗಳನ್ನು ನೀಡುತ್ತಿದೆಯೇ ಹೊರತು, ಉತ್ತಮ ಬೆಲೆ ನೀಡುತ್ತಿಲ್ಲ ಎಂದರು.
ಸರ್ಕಾರ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಸಿಗಬೇಕಾದ ಬೆಲೆ ದೊರಕಿಸಿ ಕೊಡಬೇಕು ಇಲ್ಲವಾದರೆ ಹೋರಾಟದ ಹಾದಿ ನಿಶ್ಚಿತ ಎಂದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್, ಉಪಾಧ್ಯಕ್ಷ ಎಂ.ವಿ. ಗಾಡಿ, ನಿಜಗುಣ ಕೆಲಗೇರಿ, ಜಿಲ್ಲಾಧ್ಯಕ್ಷ ಎಸ್.ವಿ. ಬಸವಣ್ಣನವರ್, ಜಗದೀಶ ಪಾಟೀಲ, ರಾಜಾಪೂರ ರಾಜು, ಈರಣ್ಣ ಅರಳಿಕಟ್ಟಿ, ಚನ್ನಯ್ಯ ಹಿರೇಮಠ, ಅತ್ತಹಳ್ಳಿ ದೇವರಾಜ್, ರಮೇಶ ಈರೇಮಟ್ಟಿ, ಉಳವಪ್ಪ ಬಳಗೇರ, ನಾವಿ ಸಿದ್ನಾಳ ಇದ್ದರು.