ಪೈಲಟ್ ಯೋಜನೆ ಕೈಬಿಡಲು ಒತ್ತಾಯ
ಹುಬ್ಬಳ್ಳಿ: ಪಡಿತರ ವಿತರಣೆಯಲ್ಲಿ ಸೀಮೆ ಎಣ್ಣೆಗೆ ನೇರ ಸಬ್ಸಿಡಿ ಮತ್ತು ಎಸ್ಎಂಎಸ್ ಮೂಲಕ ಜಾರಿಗೊಳಿಸಲು ಹೊರಟಿರುವ ಪೈಲಟ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಸಾವಿತ್ರಿ ಬಾಪುಲೆ ಮಹಿಳಾ ಜಾಗೃತಿ ಸಂಘಟನೆ ನೇತೃತ್ವದಲ್ಲಿ ನಾಗರಿಕರು ಮಿನಿ ವಿಧಾನಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪಡಿತರ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಿ ಎಲ್ಲ ಬಡವರಿಗೆ ಆಹಾರ ಭದ್ರತಾ ಕಾಯ್ದೆ-2013ನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ಖಾತ್ರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪಡಿತರ ವಿತರಣಾ ವ್ಯವಸ್ಥೆಯಲ್ಲಿ ನೇರ ಸಬ್ಸಿಡಿ ಯೋಜನೆಗಳನ್ನು ಕೈಬಿಟ್ಟು ಜನಕಲ್ಯಾಣ ಮತ್ತು ಜನತಂತ್ರ ವ್ಯವಸ್ಥೆಗೆ ಪೂರಕವಾದ ಆಡಳಿತ ಬದಲಾವಣೆ ಜಾರಿಗೊಳಿಸಬೇಕು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರ ಸೀಮೆ ಎಣ್ಣೆ ನೇರ ಸಬ್ಸಿಡಿ ಆದೇಶ ಮತ್ತು ಅಪರ ನಿರ್ದೇಶಕರು ಹಿರಿಯ ಉಪನಿರ್ದೇಶಕರ ಸುತ್ತೋಲೆಯನ್ನು ಸರ್ಕಾರ ಈ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ರಾಜ್ಯಮಟ್ಟದ ಜಾಗೃತ ಸಮಿತಿ ರಚನೆಯಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹಾಗೂ ನ್ಯಾಯಬೆಲೆ ಅಂಗಡಿಗಳ ಮಟ್ಟದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಜಾಗೃತ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ ಗುಂಡೂರಾವ್ ಅವರಿಗೆ ತಹಸೀಲ್ದಾರ ಕಚೇರಿ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಸಂಘಟನೆ ಹುಬ್ಬಳ್ಳಿ ಸಂಚಾಲಕಿ ಕೆ. ಶೋಭಾ, ಇನ್ನುಸಲಿ ಮುಲ್ಲಾ, ಸೋಮಶೇಖರ, ಮುಸ್ತಾಕ ರಿತ್ತಿ, ನಾಗರಾಜ ಗುಡ್ಡಿ ಮತ್ತಿತರರಿದ್ದರು.