ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್: ಶಿಫಾರಸು

Lingaraj Badiger
Updated On : 14 May 2014, 11:34 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 13
ಏಳು ರಸ್ತೆ ಕೂಡುವ ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಕನಿಷ್ಠ 3 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣದ ಅವಶ್ಯಕತೆ ಇದ್ದು, ಈ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ವಿಧಾನ ಪರಿಷತ್ ಭರವಸೆಗಳ ಸಮಿತಿ ಅಧ್ಯಕ್ಷ ಎಂ.ಸಿ. ನಾಣಯ್ಯ ಹೇಳಿದ್ದಾರೆ.
ಇಲ್ಲಿಯ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಎಂ.ಸಿ. ನಾಣಯ್ಯ ನೇತೃತ್ವದ ಸಮಿತಿ, ನಂತರ ಚೆನ್ನಮ್ಮ ವೃತ್ತ ಹಾಗೂ ಇಂದಿರಾ ಗಾಜಿನಮನೆಗಳಿಗೆ ಭೇಟಿ ನೀಡಿತು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾಣಯ್ಯ, ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಿಸುವಂತೆ 2002ರಲ್ಲಿ ಬಸವರಾಜ ಹೊರಟ್ಟಿಯವರು ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪ ಮಾಡಿದ್ದರು. ಆ ಸಂದರ್ಭದಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ತಗುಲುತ್ತಿದ್ದ ವೆಚ್ಚ ಅಂದಾಜು ರು. 34 ಕೋಟಿ. ಫ್ಲೈ ಓವರ್ ನಿರ್ಮಿಸುವ ಬಗ್ಗೆಯೂ ಅಂದಿನ ಸರ್ಕಾರ ಭರವಸೆ ನೀಡಿತ್ತು ಎಂದರು.
ನಂತರ 2011ರಲ್ಲಿಯೂ ಅಧಿವೇಶನದ ಸಂದರ್ಭದಲ್ಲಿ ಈ ವಿಷಯ ಕುರಿತು ಹೊರಟ್ಟಿ ಮತ್ತೊಮ್ಮೆ ಪ್ರಸ್ತಾಪಿಸಿದ್ದರು. 11-7-2011ರಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹುಡಾ ಆಯುಕ್ತರು ಪತ್ರ ಬರೆದು, ಫ್ಲೈ ಓವರ್ ನಿರ್ಮಾಣಕ್ಕೆ ಬೇಕಾದ ವೆಚ್ಚಗಳ ವಿವರಣೆ ಕೇಳಿದ್ದರು. ಆದರೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬರೆದಿದ್ದ ಪತ್ರಕ್ಕೆ ಇದುವರೆಗೂ ಹುಡಾದಿಂದ ಉತ್ತರ ಬರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೀಗ 3 ಕಿ.ಮೀ. ಉದ್ದದ ಫ್ಲೈ ಓವರ್ ನಿರ್ಮಾಣಕ್ಕೆ ರು. 150 ಕೋಟಿ ಅಂದಾಜು ವೆಚ್ಚ ತಗುಲಲಿದ್ದು, ಮಹಾನಗರ ಪಾಲಿಕೆ ಹಾಗೂ ಹುಡಾ ಸಹ ತಮ್ಮ ಪಾಲಿನ ವೆಚ್ಚ ಭರಿಸಬೇಕು. ಇನ್ನುಳಿದಂತೆ ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ವೆಚ್ಚ ಭರಿಸಲು ತಮ್ಮ ವರದಿಯಲ್ಲಿ ಸಲಹೆ ನೀಡುವುದಾಗಿ ನಾಣಯ್ಯ ತಿಳಿಸಿದರು.
ಒಂದೇ ಸ್ಥಳದಲ್ಲಿ ಏಳು ಕೂಡು ರಸ್ತೆಗಳು ರಾಜ್ಯದ ಯಾವುದೇ ನಗರದಲ್ಲಿ ಇಲ್ಲ. ಹುಬ್ಬಳ್ಳಿಯಲ್ಲಿ ರಿಂಗ್‌ರೋಡ್ ಸಹ ಇಲ್ಲ. ಸಹಜವಾಗಿ ಚೆನ್ನಮ್ಮ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಕೇವಲ ಬೆಂಗಳೂರು ದೃಷ್ಟಿಯನ್ನಿಟ್ಟುಕೊಂಡು ಫ್ಲೈ ಓವರ್, ರಿಂಗ್‌ರೋಡ್ ನಿರ್ಮಿಸುವ ಸರ್ಕಾರಗಳು, ಹುಬ್ಬಳ್ಳಿಯಂಥ ನಗರಗಳ ಅಭಿವೃದ್ಧಿಗೂ ಗಮನ ಹರಿಸಬೇಕು. ಪಾಲಿಕೆಗೆ ಸರ್ಕಾರ ನೀಡುವ ರು. 100 ಕೋಟಿಗಳ ಅನುದಾನದಲ್ಲಿ ಉಳಿಯುವ ಹಣವನ್ನು ಫ್ಲೈ ಓವರ್‌ಗೆ ಮೀಸಲಿಡಬೇಕು ಎಂದು ಹೇಳಿದರು. ಈ ಭಾಗದ ಜನಪ್ರತಿನಿಧಿಗಳು ಸಹ ಈ ಬಾರಿಯ ಅಧಿವೇಶನದಲ್ಲಿ ಹುಬ್ಬಳ್ಳಿಯಲ್ಲಿ ಫ್ಲೈಓವರ್ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ತಿಳಿಸಿದರು.
ಕಳಪೆ ಕಾಮಗಾರಿ: ಇಂದಿರಾ ಗಾಜಿನಮನೆಯಲ್ಲಿ ನಡೆದಿರುವ ವಿವಿಧ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ ಕಂಡುಬಂದಿದ್ದು, ಈ ಕುರಿತು ವಿಧಾನ ಪರಿಷತ್ ಸಭಾಪತಿಗೆ ನೀಡುವ ವರದಿಯಲ್ಲಿ ವಿವರಣೆ ನೀಡಲಾಗುವುದು ಎಂದು ನಾಣಯ್ಯ ಹೇಳಿದರು.
ರು. 8 ಕೋಟಿ ವೆಚ್ಚದಲ್ಲಿ ಇಂದಿರಾ ಗಾಜಿನಮನೆಯಲ್ಲಿ ನಿರ್ಮಿತಿ ಕೇಂದ್ರ ವಿವಿಧ ಕಾಮಗಾರಿ ಕೈಗೊಂಡಿದೆ. ಇಂದಿರಾ ಗಾಜಿನಮನೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದರೆ ನಿರ್ವಹಣೆ ಮತ್ತಷ್ಟು ಉತ್ತಮವಾಗುವ ಸಾಧ್ಯತೆ ಇದೆ. ಇಂದಿರಾ ಗಾಜಿನಮನೆಗೆ ಬರುವ ಸಾರ್ವಜನಿಕರಿಂದ ಸಂಗ್ರಹಗೊಂಡಿರುವ ಪ್ರವೇಶ ಶುಲ್ಕ ರು. 50 ಲಕ್ಷವನ್ನು ಗಾಜಿನಮನೆ ಅಭಿವೃದ್ಧಿಗೇ ಬಳಸಿಕೊಳ್ಳಬೇಕು. ಕಬ್ಬನ್ ಪಾರ್ಕ್ ಮಾದರಿಯಲ್ಲಿ ಇಂದಿರಾ ಗಾಜಿನಮನೆ ಅಭಿವೃದ್ಧಿಗೊಳಿಸಬೇಕು.
ರಾಜ್ಯದಾದ್ಯಂತ ನಿರ್ಮಿತಿ ಕೇಂದ್ರ ಕೈಗೊಂಡಿರುವ ಕಾಮಗಾರಿಗಳಲ್ಲಿ ಕೆಲವಷ್ಟು ಮಾತ್ರ ಉತ್ತಮವಾಗಿದ್ದರೆ, ಹೆಚ್ಚಿನ ಪ್ರಮಾಣ ಕಳಪೆಯಾಗಿರುತ್ತದೆ. ಜಿಲ್ಲಾಧಿಕಾರಿಗಳು ನಿರ್ಮಿತಿ ಕೇಂದ್ರದ ಅಧಿಕಾರಿಗಳ ಮೇಲೆ ಹದ್ದಿನಕಣ್ಣಿಡಬೇಕು ಎಂದರು.
ಸಮಿತಿ ಸದಸ್ಯರಾದ ರಾಮಚಂದ್ರೇಗೌಡ, ಬಸವರಾಜ ಹೊರಟ್ಟಿ, ವೀರಣ್ಣ ಮತ್ತಿಕಟ್ಟಿ, ಕೆ.ವಿ. ನಾರಾಯಣಸ್ವಾಮಿ, ದಯಾನಂದ, ಮೇಯರ್ ಶಿವು ಹಿರೇಮಠ, ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಹುಡಾ ಆಯುಕ್ತ ಎಂ. ತಿಪ್ಪೇಶ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಪಾಲಿಕೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹುಡಾ ಆಯುಕ್ತ ಎಂ. ತಿಪ್ಪೇಶ ಅವರನ್ನು ತರಾಟೆಗೆ ತೆಗೆದುಕೊಂಡ ವಿಧಾನ ಪರಿಷತ್ ಭರವಸೆಗಳ ಸಮಿತಿ ಅಧ್ಯಕ್ಷ ಎಂ.ಸಿ. ನಾಣಯ್ಯ, 11-7-2011ರಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬರೆದಿರುವ ಪತ್ರಕ್ಕೆ ಮಾರುತ್ತರ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ನಾಣಯ್ಯ ಖೇದ
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತವರೂರಲ್ಲಿ ಒಂದು ಫ್ಲೈಓವರ್ ನಿರ್ಮಾಣಕ್ಕೂ ಪರದಾಡಬೇಕಿದೆ ಎಂದು ವಿಧಾನ ಪರಿಷತ್ ಭರವಸೆಗಳ ಸಮಿತಿ ಅಧ್ಯಕ್ಷ ಎಂ.ಸಿ. ನಾಣಯ್ಯ ಖೇದ ವ್ಯಕ್ತಪಡಿಸಿದರು. ಬೆಂಗಳೂರಿನ ನಂತರ ಎರಡನೇ ದೊಡ್ಡ ನಗರವಾಗಿರುವ ಹುಬ್ಬಳ್ಳಿಯಲ್ಲಿ ಒಂದು ಫ್ಲೈಓವರ್ ಇಲ್ಲ. ರಿಂಗ್‌ರೋಡ್ ಅಂತೂ ಇಲ್ಲವೇ ಇಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿರುವವರು ತಮ್ಮ ಆಡಳಿತದ ಅವಧಿಯಲ್ಲಿ ಸ್ವಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವುದು ಸಹಜ. ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗ ಫ್ಲೈಓವರ್ ನಿರ್ಮಾಣಕ್ಕೆ ರು. 100 ಕೋಟಿಯನ್ನಾದರೂ ವಿಶೇಷ ಅನುದಾನ ನೀಡಿರುತ್ತಿದ್ದರೆ ಯಾರೂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement