ಅವಳಿ ನಗರದಲ್ಲಿ ಬಿಜೆಪಿ ವಿಜಯೋತ್ಸವ
ಹುಬ್ಬಳ್ಳಿ: ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಗೆಲುವಿನ ಹಿನ್ನೆಲೆಯಲ್ಲಿ ನೂರಾರು ಕಾರ್ಯಕರ್ತರು ಇಲ್ಲಿಯ ಉಣಕಲ್ ಕ್ರಾಸ್‌ನಲ್ಲಿ ಶುಕ್ರವಾರ ಸಂಜೆ ವಿಜಯೋತ್ಸವ ಆಚರಿಸಿದರು.
ಸಂಜೆ ಉಣಕಲ್ ಕ್ರಾಸ್‌ಗೆ ಆಗಮಿಸಿದ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಬಣ್ಣ ಎರಚಿದ ಕಾರ್ಯಕರ್ತರು, ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿದರು.
ನರೇಂದ್ರ ಮೋದಿ ಮುಖವಾಡ ಧರಿಸಿದ್ದ ಬಿಜೆಪಿ ಕಾರ್ಯಕರ್ತರು, ಗೆಲುವಿನ ಸಂಕೇತ ಬೀರಿದರು. ಸುಮಾರು 15-20 ನಿಮಿಷಗಳವರೆಗೆ ಉಣಕಲ್ ಕ್ರಾಸ್‌ನಲ್ಲಿ ಪಟಾಕಿ ಸಿಡಿಸಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಉಣಕಲ್ ಕ್ರಾಸ್‌ನಲ್ಲಿ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದ ಸಂಸದ ಪ್ರಹ್ಲಾದ ಜೋಶಿ, ನಂತರ ಬಸವವನ ಕಿತ್ತೂರ ರಾಣಿ ಚೆನ್ನಮ್ಮ ವೃತ್ತಗಳಿಗೆ ಭೇಟಿ ನೀಡಿದರು. ಮೂರುಸಾವಿರ ಮಠಕ್ಕೆ ತೆರಳಿ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ನಂತರ ಶ್ರೀ ಸಿದ್ಧಾರೂಢಮಠದಲ್ಲಿ ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಬಿಜೆಪಿ ಮುಖಂಡರಾದ ತಿಪ್ಪಣ್ಣ ಮಜ್ಜಗಿ, ವೀರಣ್ಣ ಸವಡಿ, ಮಲ್ಲಿಕಾರ್ಜುನ ಸಾವಕಾರ ಮತ್ತಿತರರು ಹಾಜರಿದ್ದರು.